ಮೃತ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಿದ ಯಶ್.

58
firstsuddi

ನಟ ಯಶ್ ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಅಭಿಮಾನಿಗಳ ಮನೆಗೆ ಯಶ್ ತಂಡದವರು ಭೇಟಿ ನೀಡಿ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಮೃತ ಅಭಿಮಾನಿಗಳಾದ ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ. ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್ ನೀಡಲಾಗಿದ್ದು, ಗಾಯಗೊಂಡವರಿಗೆ 2 ಲಕ್ಷ ರೂಪಾಯಿಯ ಪರಿಹಾರದ ಚೆಕ್ ಅನ್ನು ಇಂದು ವಿತರಿಸಿದ್ದಾರೆ.

ಒಂದು ಕಡೆ ಯಶ್ ಪರಿಹಾರವನ್ನು ನೀಡಿದ್ದರೆ ಮತ್ತೊಂದು ಕಡೆ ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯವೊಂದನ್ನು ಮಾಡಿದ್ದಾರೆ. ಸರ್ಕಾರ ಘೋಷಿಸಿದ 2 ಲಕ್ಷ ರೂಪಾಯಿ ಪರಿಹಾರ ಸಾಕಾಗಲ್ಲ. ಹೀಗಾಗಿ ಮೂವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡುವಂತೆ ಲಕ್ಷ್ಮೇಶ್ವರ ಸೂರಣಗಿ ಗ್ರಾಮಸ್ಥರು ಆಗ್ರಹ ನಡೆಸಿದ್ದಾರೆ.

ಘಟನೆ ಹಿನ್ನೆಲೆ:
ಯಶ್ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಪ್ರತಿ ವರ್ಷ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಅಭಿಮಾನಿಗಳು ಈ ಬಾರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ದುರ್ಘಟನೆ ನಡೆಯಿತು. ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶದಿಂದ ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಚಾರ ತಿಳಿಯುತಿದ್ದಂತೆಯೇ ನಟ ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಆಸ್ಪತ್ರೆಗೂ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಇನ್ಮುಂದೆ ಯಾರೂ ನನ್ನ ಕಟೌಟ್ ಹಾಕಬೇಡಿ ಎಂದು ಅಭಿಮಾನಿಗಳಲ್ಲಿ ಯಶ್ ಮನವಿ ಮಾಡಿಕೊಂಡರು. ಸದ್ಯ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.