ಬೆಂಗಳೂರು : ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಆರೋಪದಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಳಿಸಲಾಗಿದ್ದು, ನಾಳೆ (ಮೇ 24) ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ.
ಜನವರಿ 9 ರಂದು ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಿದ್ದರು. ಬಳಿಕ ಕೋರ್ಟ್ ತಾಕೀತಿನ ಬಳಿಕ ಜ.13ಕ್ಕೆ ರಾಮನಗರದಲ್ಲಿ ಪಾದಯಾತ್ರೆಯನ್ನು ಮೊಟಕುಗೊಳಿಸಿತ್ತು. ಫೆ.27ಕ್ಕೆ ರಾಮನಗರದಿಂದ ಮತ್ತೆ ಪಾದಯಾತ್ರೆ ಆರಂಭವಾಗಿತ್ತು. 5 ದಿನಗಳ ಯಾತ್ರೆ ಬಳಿಕ ಮಾರ್ಚ್ 3ರಂದು ಬೆಂಗಳೂರಿನಲ್ಲಿ ಸಮಾರೋಪಗೊಂಡಿತ್ತು.
ಪಾದಯಾತ್ರೆ ಸಂದರ್ಭದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸದ ಹಿನ್ನೆಲೆ ಕಾಂಗ್ರೆಸ್ ನಾಯಕರ ವಿರುದ್ಧ ವಿವಿಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಸಿದ್ದರಾಮಯ್ಯಗೆ ಸಮನ್ಸ್ ಜಾರಿ ಮಾಡಿದೆ.










