ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ.

65
firstsuddi

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡು ಸುದ್ದಿಯಾಗಿದ್ದರು. ಇದೀಗ ವಿಶ್ವ ತಾಯಂದಿರ ದಿನದಂದು ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ.

ಪ್ರಿಯಾಂಕ ಇನ್ಸ್ಟಾದಲ್ಲಿ ಮಗಳ ಫೋಟೋ ಶೇರ್ ಮಾಡಿದ್ದು, ತನ್ನ ಮಗಳು ಅಕಾಲಿಕವಾಗಿ ಜನಿಸಿದ್ದಾಳೆ ಮತ್ತು 100 ದಿನಗಳಿಂದ NICU (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ದಲ್ಲಿ ಇದ್ದಳು. ಯಾರ ಬಳಿಯೂ ಹಂಚಿಕೊಳ್ಳದ ನೋವಿನಲ್ಲಿ ಇದ್ದೆವು. ಇದೀಗ ನಮ್ಮ ಮುದ್ದು ಕಂದಮ್ಮ ನಮ್ಮ ಮನೆಗೆ ಕೊನಗೂ ಬಂದಿದೆ. ಇದರಿಂದ ನಮ್ಮ ಕುಟುಂಬದ ಪ್ರಯಾಣವು ವಿಶಿಷ್ಟವಾಗಿದೆ. ಪ್ರತಿ ಹೆಜ್ಜೆಯಲ್ಲೂ ನಿಸ್ವಾರ್ಥವಾಗಿದ್ದ ರಾಡಿ ಚಿಲ್ಡ್ರನ್ಸ್ ಲಾ ಜೊಲ್ಲಾ ಮತ್ತು ಲಾಸ್ ಏಂಜಲೀಸ್ ನ ಸೀಡರ್ ಸಿನಾಯ್ನಲ್ಲಿರುವ ಪ್ರತಿಯೊಬ್ಬ ವೈದ್ಯರು, ನರ್ಸ್ ಮತ್ತು ತಜ್ಞರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನಮ್ಮ ಮುಂದಿನ ಅಧ್ಯಾಯ ಈಗ ಪ್ರಾರಂಭವಾಗುತ್ತದೆ. ಮಮ್ಮಿ ಮತ್ತು ಡ್ಯಾಡಿ ನಿನ್ನನ್ನು ಪ್ರೀತಿಸುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಪಡೆದಿರುವ ಅವರು ತಮ್ಮ ಮುದ್ದು ಮಗಳಿಗೆ ನಾಮಕರಣ ಮಾಡಿದ್ದಾರೆ ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರು ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಕಳೆದ ಜನವರಿ 22ರಂದು ಸೋಶಿಯಲ್ ಮೀಡಿಯಾ ಮೂಲಕ ಮಗಳ ಜನನದ ಕುರಿತು ದಂಪತಿಗಳು ಬಹಿರಂಗಪಡಿಸಿದ್ದರು, “ಸರೋಗಸಿ ಮೂಲಕ ನಾವು ನಮ್ಮ ಮಗುವನ್ನು ಸ್ವಾಗತಿಸಿದ್ದೇವೆ. ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಲು ಮತ್ತು ಗೌಪ್ಯತೆ ಕಾಪಾಡಲು ಸಹಕರಿಸಿ” ಅಂತಾ ಪ್ರಿಯಾಂಕಾ ತಮ್ಮ ಪೋಸ್ಟ್ ನಲ್ಲಿ ಕೇಳಿಕೊಂಡಿದ್ದರು.