ಮೋದಿ ಅವರ ಫೋಟೋವನ್ನು ರೂಪಾಂತರಗೊಳಿಸಿ ಪೋಸ್ಟ್ ಮಾಡಿದ್ದ ಯುವಕನಿಗೆ ಒಂದು ವರ್ಷ ಸಾಮಾಜಿಕ ಜಾಲತಾಣ ಬಳಸದಂತೆ ನಿಷೇಧ….

346
firstsuddi

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ತಮಿಳುನಾಡಿನ ಯುವಕನಿಗೆ ಮದ್ರಾಸ್ ಹೈಕೋರ್ಟ್ 1ವರ್ಷ ಸಾಮಾಜಿಕ ಜಾಲತಾಣವನ್ನು ಬಳಸದಂತೆ ನಿರ್ಬಂಧ ಹೇರಿದೆ. ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ ಜಬಿನ್ ಚಾರ್ಲ್ಸ್ ಎಂಬ ಯುವಕ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ರೂಪಾಂತರಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಚಾರ್ಲ್ಸ್ ಅವರು ಭಾವಚಿತ್ರವನ್ನು ಪೋಸ್ಟ್ ಮಾಡಿದ್ದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತ ನಂಜಿಲ್ ರಾಜ ಅವರು ಉನ್ನತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಅವಮಾನ ಮಾಡಿದ್ದಾರೆ ಎಂದು ಚಾರ್ಲ್ಸ್ ಅವರ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದರು. ಹೀಗಾಗಿ ಚಾರ್ಲ್ಸ್ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಸಂಬಂದಿಸಿದಂತೆ ಮಧುರೈ ಹೈಕೋರ್ಟ್ ಚಾರ್ಲ್ಸ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಇನ್ನೂ 1 ವರ್ಷಗಳ ಕಾಲ ಸಾಮಾಜಿಕ ಜಾಲತಾಣವನ್ನು ಬಳಸದಂತೆ ನಿರ್ಬಂಧ ಹೇರಿದೆ. ಒಂದು ವೇಳೆ ಹೈಕೋರ್ಟ್ ಆದೇಶವನ್ನು ತಪ್ಪಿದ್ದಲ್ಲಿ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿದೆ. ಅಲ್ಲದೇ ಚಾರ್ಲ್ಸ್ ಮೋದಿ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿಸಿ ಟೀಕಿಸಿದ್ದಕ್ಕೆ ಕ್ಷಮಾಪಣೆ ಕೋರುತ್ತೇನೆ. ದೇಶದ ಯಾವ ಪ್ರಜೆಗೂ ಪ್ರಧಾನಿಯನ್ನು ಅಗೌರವಿಸುವ ಹಕ್ಕು ಇಲ್ಲ. ನಾನು ಈಗಾಗಲೇ ಪೋಸ್ಟ್ ಮಾಡಿದ್ದ ಫೋಟೋವನ್ನು ಬ್ಲಾಕ್ ಮಾಡಿದ್ದೇನೆ ಎಂದಿದ್ದಾರೆ.