ಮೋದಿ ಟ್ವಿಟರ್, ಇನ್​ಸ್ಟಾ ಡಿಪಿಯಲ್ಲಿ ರಾರಾಜಿಸುತ್ತಿದೆ ತ್ರಿವರ್ಣ ಧ್ವಜ.

50
firstsuddi

ನವದೆಹಲಿ : 75ನೇ ಸ್ವಾತಂತ್ರ್ಯ ದಿನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್, ಇನ್ ಸ್ಟಾಗ್ರಾಮ್ ಖಾತೆಯ ಡಿಪಿ ಬದಲಾಯಿಸಿದ್ದು, ತ್ರಿವರ್ಣ ಧ್ವಜದ ಚಿತ್ರವನ್ನು ಹಾಕಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದು ವಿಶೇಷವಾದ ದಿನ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ. ಎಲ್ಲರೂ ಈ ಸಂಭ್ರಮ ಆಚರಿಸೋಣ. ತ್ರಿವರ್ಣ ಧ್ವಜವನ್ನು ಸಾಮೂಹಿಕವಾಗಿ ಹಾರಿಸುವ ಮೂಲಕ ಸಂಭ್ರಮ ಇಮ್ಮಡಿಗೊಳಿಸೋಣ. ಸಾಮಾಜಿಕ ಜಾಲತಾಣಗಳ ಡಿಪಿಯನ್ನು ನಾನು ಬದಲಿಸಿದ್ದೇನೆ. ನೀವು ಕೂಡ ಬದಲಿಸಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ಇಂದು ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಾಲಿ ವೆಂಕಯ್ಯ ಅವರ ಜನ್ಮದಿನವಾಗಿದ್ದು, ಅವರಿಗೆ ನಮನ ಸಲ್ಲಿಸಿದರು. ಗೌರವಾನ್ವಿತ ಪಿಂಗಾಲಿ ವೆಂಕಯ್ಯ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ತ್ರಿವರ್ಣ ಧ್ವಜವನ್ನು ನೀಡಿದ ಅವರ ಸಾಧನೆಯನ್ನು ದೇಶ ಸ್ಮರಿಸುತ್ತದೆ. ಚಿರಋಣಿಯಾಗಿದೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆದು ರಾಷ್ಟ್ರೀಯ ಪ್ರಗತಿ ಕೆಲಸವನ್ನು ಮುಂದುವರಿಸೋಣ ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.