ಮೋದಿ ಫೋಟೋ ಹರಿದಿದ್ದ ಕಾಂಗ್ರೆಸ್ ಶಾಸಕನಿಗೆ ದಂಡ ವಿಧಿಸಿದ ಕೋರ್ಟ್.

40
firstsuddi

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹರಿದ ಆರೋಪದಡಿ ಕಾಂಗ್ರೆಸ್ ಶಾಸಕನಿಗೆ ಗುಜರಾತ್ ನ್ಯಾಯಾಲಯ 99 ರೂ. ದಂಡ ವಿಧಿಸಿದೆ.

ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಎ ಧಾಧಲ್ ಅವರು ಭಾರತೀಯ ದಂಡ ಸಂಹಿತೆಯ 447ರ ಅಡಿಯಲ್ಲಿ ವಂಸ್ಡಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಅನಂತ್ ಪಟೇಲ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ.

2017ರಲ್ಲಿ ಪಟೇಲ್ ಮತ್ತು ಇತರರು ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನವಸಾರಿ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕಚೇರಿಗೆ ಪ್ರವೇಶಿಸಿ ಅಶಿಸ್ತಿನ ರೀತಿಯಲ್ಲಿ ವರ್ತಿಸಿದ್ದರು. ವಿಸಿಯ ಮೇಜಿನ ಮೇಲಿದ್ದ ಪ್ರಧಾನಿ ಮೋದಿಯವರ ಫೋಟೋವನ್ನು ಹರಿದು ಹಾಕಿದರು ಎಂಬ ಆರೋಪ ಕೇಳಿ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ 2017ರ ಮೇನಲ್ಲಿ ಜಲಾಲ್ ಪೋರ್ ಪೊಲೀಸರು ಶಾಸಕ ಪಟೇಲ್ ಮತ್ತು ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಕ್ರಿಮಿನಲ್ ಅತಿಕ್ರಮಣಕ್ಕಾಗಿ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಾಲಯವು 99 ರೂ. ದಂಡ ಪಾವತಿಸಲು ವಿಫಲವಾದರೆ ಏಳು ದಿನಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ.