ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್.

58
firstsuddi

ಬೆಂಗಳೂರು : ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಬಿಎಸ್‍ವೈ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಶಾಸಕಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಬಿಎಸ್‍ವೈ ಭೇಟಿ ನಂತರ ಮಾಧ್ಯಮದವರೊಂದಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಈ ಭೇಟಿಯಲ್ಲಿ ಕುತೂಹಲದ ವಿಚಾರ ಏನಿಲ್ಲ. ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ ಅವರನ್ನು ಭೇಟಿಯಾಗುತ್ತೇನೆ. ಅವರು ಹಿರಿಯರು, ನಮ್ಮ ಸಮಾಜದ ಮುಖಂಡರು. ಇಂದು ಗುರುಪೂರ್ಣಿಮಾ. ಹಾಗಾಗಿ ಹಿರಿಯರ ಆಶೀರ್ವಾದ ಪಡೆಯೋಣವೆಂದು ಬಂದೆ. ರಾಜಕಾರಣದ ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಳಂಬ ವಿಚಾರದ ಬಗ್ಗೆ ಯಡಿಯೂರಪ್ಪ ಬಳಿ ಚರ್ಚೆ ಮಾಡಿದ್ದೇನೆ. ತಾಂತ್ರಿಕ ಕಾರಣಕ್ಕೆ ಮೀಸಲಾತಿ ವಿಳಂಬ ಆಗಿದೆ. ಬೊಮ್ಮಾಯಿ ಅವರು ಬೇರೆ ಸಮುದಾಯಗಳಿಗೆ ತೊಂದರೆ ಆಗದಂತೆ ಮೀಸಲಾತಿ ಕೊಡುವ ಭರವಸೆ ನೀಡಿದ್ದಾರೆ ಎಂದರು. ಇದೇ ವೇಳೆ ಶಿವಕುಮಾರೋತ್ಸವಕ್ಕೆ ಬೆಂಬಲಿಗರ ಒತ್ತಾಯದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಕುಮಾರೋತ್ಸವ ಮಾಡಿ ಅಂತ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮೋತ್ಸವವನ್ನು ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ. ಸಿದ್ದರಾಮೋತ್ಸವ ಕಮಿಟಿಯಲ್ಲಿ ನಾನೂ ಇದ್ದೀನಿ. 75 ವರ್ಷ ಅನ್ನೋದು ಒಬ್ಬ ರಾಜಕಾರಣಿಗೆ ಸಾರ್ಥಕತೆ ತರುವ ವಯಸ್ಸಾಗಿದೆ ಎಂದರು.