ಯಮುನೆಗೆ ವಿಷ: ಕೇಜ್ರಿವಾಲ್ ಉತ್ತರಕ್ಕೆ ಚುನಾವಣಾ ಆಯೋಗ ಅತೃಪ್ತಿ.

29

ನವದೆಹಲಿ: ಯಮುನಾ ನದಿಗೆ ಹರಿಯಾಣ ಸರ್ಕಾರ ವಿಷ ಬೆರೆಸುತ್ತಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿರುವ ಆರೋಪವು ಜನರ ಮನಸಿನಲ್ಲಿ ಶಾಶ್ವತ ಗಾಯವನ್ನುಂಟು ಮಾಡಬಹುದು ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ. ಈ ಆರೋಪದ ಕುರಿತು ಸೂಕ್ತ ವಿವರಣೆ ನೀಡಲು ಕೇಜ್ರಿವಾಲ್ ಅವರಿಗೆ ಮತ್ತೊಂದು ನೋಟಿಸ್ ನೀಡಿದೆ. ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಪಡೆದ ನೀರು ಅತ್ಯಂತ ವಿಷಕಾರಿಯಾಗಿದ್ದು, ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಕೇಜ್ರಿವಾಲ್ ಅವರು ಇಸಿಯ ಮೊದಲ ನೋಟಿಸ್‍ಗೆ ನೀಡಿರುವ 14 ಪುಟಗಳ ಉತ್ತರದಲ್ಲಿ ಪ್ರತಿಕ್ರಿಯಿಸಿದ ಮರು ದಿನವೇ ಇಸಿ ಈ ರೀತಿ ಹೇಳಿದೆ. ಇಸಿಯ ಈ ನಡೆಗೆ ಕಿಡಿಕಾರಿರುವ ಕೇಜ್ರಿವಾಲ್, ಚುನಾವಣಾ ಆಯೋಗದ ಮುಖ್ಯಸ್ಥರಾದ ಮುಖ್ಯಸ್ಥ ರಾಜೀವ್‍ಕುಮಾರ್ ಅವರು ರಾಜಕೀಯ ಆಟ ಆಡುತ್ತಿದ್ದಾರೆ. ಅವರು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತಿದ್ದಾರೆ. ಅಲ್ಲದೇ, ನಿವೃತ್ತಿಯ ಬಳಿಕ ಅಧಿಕಾರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಆರೋಪಿಸಿದರು. ಕೇಜ್ರಿವಾಲ್ ಅವರು ನೋಟಿಸ್‍ಗೆ ನೀಡಿರುವ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇಸಿ, ನದಿ ನೀರು ವಿಷಮಯವಾಗುತ್ತಿರುವುದು ಮತ್ತು ಹೆಚ್ಚುತ್ತಿರುವ ಅಮೋನಿಯಾ ಬಳಕೆ ಚಾಲ್ತಿಯಲ್ಲಿರುವ, ದೀರ್ಘಕಾಲದ ಹಾಗೂ ಕಾನೂನಾತ್ಮಕವಾದ ಆಡಳಿತ ಸಮಸ್ಯೆಯಾಗಿದೆ. ಇದನ್ನು ಬೆರೆಸುವುದು ಸರಿಯಲ್ಲ. ಅಲ್ಲದೆ, ಕೇಜ್ರಿವಾಲ್ ಮಾಡಿರುವ ಆರೋಪಗಳು ಜನರ ನಡುವೆ ದ್ವೇಷ ಪ್ರಚೋದಿಸುತ್ತವೆ. ಸಾರ್ವಜನಿಕ ಶಾಂತಿಗೂ ಭಂಗ ತರಲಿವೆ. ತಮ್ಮ ಆರೋಪಗಳಿಗೆ ಸಂಬಂಧಿಸಿ ಸೂಕ್ತ ಸಾಕ್ಷ್ಯ ಮತ್ತು ವಿವರಣೆಯನ್ನು ನೀಡುವಂತೆ ಎರಡನೇ ನೋಟಿಸ್‍ನಲ್ಲಿ ತಾಕೀತು ಮಾಡಿದೆ.