ಪೇಜಾವರ ಶ್ರೀಗಳ ಬಗ್ಗೆ ವಿವಾದಾತ್ಮಕ ಹೇಳಿಕೆ – ಕ್ಷಮೆ ಕೋರಿದ ಹಂಸಲೇಖ.

94
firstsuddi

ಮೈಸೂರು : ಪೇಜಾವರ ಶ್ರೀಗಳ ಕುರಿತು ನಾದಬ್ರಹ್ಮ ಹಂಸಲೇಖ ಅವರು ಮೈಸೂರಿನ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಹಂಸಲೇಖ ಅವರು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.

ನನಗೆ ಗೊತ್ತಿದೆ. ಎಲ್ಲ ಮಾತುಗಳಿಗೂ ಅದು ವೇದಿಕೆಯಲ್ಲ. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರದಂತಹ ಗುರು-ಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಒಬ್ಬ ಸಂಗೀತಗಾರ, ನಮಗ್ಯಾಕೆ ಟ್ರೋಲ್. ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಿಂದ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು ಎಂದು ಹೇಳಿದ್ದಾರೆ.

ನಗರದಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಅವರು, ಪೇಜಾವರ ಸ್ವಾಮೀಜಿಗಳು ದಲಿತರ ಮನೆಗೆ ವಾಸ ಮಾಡಲು ಹೋಗಿದ್ದಾರೆ ಎಂಬ ಸುದ್ದಿ ಕೇಳಿಬಂದಿತು. ಆದ್ರೆ, ಅವರು ಹೋಗಿ ಕುಳಿತುಕೊಳ್ಳೋಕೆ ಆಗುತ್ತೆ ಅಷ್ಟೇ, ಅವರು ತಿನ್ನುವ ಕೋಳಿ, ಮೊಟ್ಟೆ ತಿನ್ನೋಕೆ ಆಗುತ್ತಾ ?. ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ದಲಿತರ ಮನೆಗೆ ಬಲಿತರು ಹೋಗುವುದು ಏನು ದೊಡ್ಡ ವಿಷಯ ಎಂದು ನನಗೆ ಅನಿಸಿತು. ದಲಿತರನ್ನು ಬಲಿತರು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು. ದಲಿತರು ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೇವೆ ಎಂದು ಬಲಿತರು ಹೇಳಬೇಕು ಎಂದಿದ್ದರು.