ಯಾವ ಮುಖವಿಟ್ಟುಕೊಂಡು ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೀರ: ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ವಾಗ್ದಾಳಿ.

31

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ಸರ್ಕಾರಿ ಸಾರಿಗೆ ದರ ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕನ್ನಡಿಗರ ಜೇಬಿಗೆ ಮತ್ತೊಮ್ಮೆ ಕನ್ನ ಹಾಕಿದೆ ಪಿಕ್ ಪಾಕೆಟ್ ಕಾಂಗ್ರೆಸ್ ಸರ್ಕಾರ. ಬಸ್ ಪ್ರಯಾಣದ ಬೆಲೆಯನ್ನು ಶೇ.15ರಷ್ಟು ಹೆಚ್ಚಳ ಮಾಡಿರುವುದು ನೂತನ ವರ್ಷದ ಆರಂಭದಲ್ಲಿ ಕನ್ನಡಿಗರಿಗೆ ಮಾಡುತ್ತಿರುವ ದೊಡ್ಡ ದ್ರೋಹವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ, ಎಲ್ಲಾ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡುವುದೇ ನಿಮ್ಮ ಅಸಲಿ ಕರ್ನಾಟಕ ಮಾಡೆಲ್ ಆಗಿದೆಯಾ. ಮಹಾನ್ ಸುಳ್ಳುಗಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೆ, ಸಾರಿಗೆ ಸಂಸ್ಥೆಗಳು ಹೆಚ್ಚಿನ ಲಾಭದಲ್ಲಿವೆ ಎಂದಾದ ಮೇಲೆ ಸಾರಿಗೆ ಬೆಲೆಯನ್ನು ಹೆಚ್ಚಳ ಮಾಡಿರುವುದು ಯಾವ ಪುರುಷಾರ್ಥ ಸಾಧನೆಗಾಗಿ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಸಿಎಂ ಸಿದ್ದರಾಮಯ್ಯ ಅವರೇ ಯಾವ ಮುಖವಿಟ್ಟುಕೊಂಡು ನೀವು ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಿರಿ, ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲವಾಗಿರುವ ನೀವು ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ. ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂಬುದನ್ನು ಇದೀಗ ಶೇಕಡ 15% ಬಸ್ ಪ್ರಯಾಣ ಬೆಲೆಯನ್ನು ಹೆಚ್ಚಿಸುವ ಮೂಲಕ ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಬರೆ ಎಳೆದಿದ್ದೀರಿ. ಶಕ್ತಿ ಯೋಜನೆ ಹೇಗಾಗಿದೆ ಎಂದರೆ ವಾಣಿಜ್ಯ ಉತ್ಪನ್ನಗಳ ಮಾರಾಟದ ಆಕರ್ಷಣೆಗೆ ಮಳಿಗೆಗಳಲ್ಲಿ 1 ಖರೀದಿಸಿದರೆ 1 ಉಚಿತ ಎಂಬ ಬೋರ್ಡ್ ಪ್ರದರ್ಶಿಸುವ ಮಾದರಿಯಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದೀರಿ. ಶೇಕಡ 15 ರಷ್ಟು ಬಸ್ ಬೆಲೆ ಏರಿಕೆ ಕಾಂಗ್ರೆಸ್ ಸರ್ಕಾರದ ನಿರ್ಧಾರ ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದ್ದು ಇದನ್ನು ವಿರೋಧಿಸುವ ಮೂಲಕ ಬಿಜೆಪಿ ಜನರ ಪರ ದನಿ ಎತ್ತಲಿದೆ ಎಂದು ಹೇಳಿದ್ದಾರೆ.