ರಾಜಸ್ವ ಹಣ ದುರುಪಯೋಗ – ಸಬ್ ರಿಜಿಸ್ಟ್ರಾರ್ ಗಳು ಹಾಗೂ ಪತ್ರಬರಹಗಾರರಿಗೆ ಜೈಲು ಶಿಕ್ಷೆ..!

139
firstsuddi

ಮಂಡ್ಯ : ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾದ ಹಿನ್ನೆಲೆ ನಾಲ್ವರು ಸಬ್ ರಿಜಿಸ್ಟ್ರಾರ್ ಗಳು ಹಾಗೂ ಮೂವರು ಪತ್ರಬಹಗಾರರಿಗೆ ಜೆಎಂಎಫ್ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಎಸ್.ಎನ್ ಪ್ರಭಾ, ಲೀಲಾವತಿ, ಚೆಲುವರಾಜು, ಹಾಗೂ ಸುನಂದಾ ಶಿಕ್ಷೆಗೊಳಗಾದ ಉಪ ನೋಂದಣಾಧಿಕಾರಿಯಾಗಿದ್ದರೆ, ನರಸಿಂಹಮೂರ್ತಿ, ಚಂದ್ರಶೇಖರ್ ಹಾಗೂ ಬಿ.ಕೆ ರಾಮರಾವ್, ಪತ್ರಬರಹಗಾರರು. ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಾಲ್ವರು ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರಾಜಸ್ವ ಹಣವನ್ನು ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ. ಇವರುಗಳು ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. 2006 ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯನವರು ದೂರು ನೀಡಿದ್ದರು. ಈ ಸಂಬಂಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ನಾಲ್ವರು ಉಪ ನೋಂದಣಾಧಿಕಾರಿಗಳು ಹಾಗೂ ಮೂವರು ಪತ್ರಬಹಗಾರರಿಗೆ ತಲಾ 5 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ 29 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.