ಮಂಗಳೂರು: ಕಳೆದ ವರ್ಷ ಮೇ.29ಕ್ಕೆ ಕೇರಳ ಕರಾವಳಿಗೆ ಮುಂಗಾರು ತಲುಪ್ಪಿತ್ತು. ಈ ವರ್ಷ ಭಾರತೀಯ ಹವಾಮಾನ ಇಲಾಖೆ ರಾಜ್ಯಕ್ಕೆ ಮುಂಗಾರು ಮಳೆ ಜೂನ್.4ಕ್ಕೆ ಪ್ರವೇಶವಾಗಲಿದೆ ಎಂದು ತಿಳಿಸಿತ್ತು. ಆದರೆ, ಸದ್ಯದ ಸ್ಥಿತಿ ಪ್ರಕಾರ ಕೇರಳದಲ್ಲಿ ಮಳೆಯಾಗುವುದೇ ನಾಲ್ಕರಿಂದ ಐದು ದಿನ ತಡವಾಗುವ ಸಾಧ್ಯತೆಯಿದ್ದು, ಇದರಿಂದ ರಾಜ್ಯ ಕರಾವಳಿ ಹಾಗೂ ಮಲೆನಾಡಿಗೆ ಮಳೆ ಬರುವಾಗ ವಿಳಂಬವಾಗಬಹುದು. 2019ರಲ್ಲಿ ಜೂನ್.8ರಂದು ಮುಂಗಾರು ಮಾರುತ ಕೇರಳ ಪ್ರವೇಶಿಸಿತ್ತು. ಆನಂತರ ದೇಶದ ವಿವಿದೆಡೆ ಮಳೆ ಆವರಿಸುವಲ್ಲಿ ವಿಳಂಬವಾಯಿತು. ಕೇರಳದ ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿಗೆ ಹಾಗೂ ಮಲೆನಾಡಿಗೆ ಮುಂಗಾರು ತಲುಪುವುದು ವಾಡಿಕೆ. ಕೇರಳಕ್ಕೆ ಮಳೆ ಮೋಡಗಳು ಪ್ರವೇಶಿಸುತ್ತಿದ್ದಂತೆ ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿ ಆಗಿ ಕರ್ನಾಟಕಕ್ಕೆ ಬರಬೇಕಿದ್ದ ಮುಂಗಾರಿಗೆ ತಡೆಯಾಗಿತ್ತು. ಇದರಿಂದ ರಾಜ್ಯಕ್ಕೆ ಮುಂಗಾರು ತಲುಪುವಾಗ ಜೂನ್.14 ಆಗಿತ್ತು.
ಪಶ್ಚಿಮದಿಂದ ಪ್ರತಿ ಗಂಟೆಗೆ 30-40 ಕಿ.ಮೀ. ವೇಗಕ್ಕೆ ಗಾಳಿ ಬೀಸುವಿಕೆ ಗಾಳಿಯ ಚಲನೆ, ಕಡಲಿನಲ್ಲಿ ಅಬ್ಬರ ಹೆಚ್ಚಾಗುವುದು ಮತ್ತು 48 ಗಂಟೆಗಳ ನಿರಂತರ ಮಳೆ ಸುರಿಯುವಿಕೆ ಮೊದಲಾದ ಲಕ್ಷಣಗಳನ್ನು ಅವಲೋಕಿಸಿ ಹವಾಮಾನ ಇಲಾಖೆ ಮುಂಗಾರಿನ ಆಗಮನವನ್ನು ಘೋಷಿಸುತ್ತದೆ. ಆದರೆ ಈ ಬಾರಿ ಈ ತರಹದ ಬದಲಾವಣೆಗಳು ಕಂಡುಬಂದಿಲ್ಲ. ಕೇರಳ, ಕರ್ನಾಟಕದ 9 ನಿಗದಿತ ಕೇಂದ್ರಗಳಲ್ಲಿ ನಿರಂತರ ಮಳೆಯಾಗಿದ್ದು ಕಂಡುಬಂದರೆ ಮಾತ್ರ ಮುಂಗಾರು ಘೋಷಣೆ ಮಾಡುತ್ತಾರೆ. ಆದರೆ, ಸದ್ಯ ಆ ರೀತಿಯ ವಾತಾವರಣ ಇಲ್ಲವಾಗಿದ್ದು, ಮುಂದಿನ 4 ರಿಂದ 5 ದಿನಗಳ ಒಳಗಾಗಿ ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸುವ ನಿರೀಕ್ಷೆ ಇದ್ದು, ಕರಾವಳಿ ಹಾಗೂ ಮಲೆನಾಡಿಗೆ ಜೂನ್ ಎರಡನೇ ವಾರದ ಬಳಿಕ ಮುಂಗಾರು ಮಳೆ ನಿರೀಕ್ಷೆ ಹೊಂದಲಾಗಿದೆ.










