ಬೆಂಗಳೂರು : ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮವಾಗಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಸದ್ಯಕ್ಕೆ ದಂಡ ವಿಧಿಸುವುದಿಲ್ಲ. ಆದರೆ ಜನರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರು.
ಚಿತ್ರಮಂದಿರಗಳು, ಶಾಲಾ-ಕಾಲೇಜುಗಳು, ಹೋಟೆಲ್, ಮಾಲ್ಗಳು, ರೆಸ್ಟೋರೆಂಟ್, ಒಳಾಂಗಣ ಕಾರ್ಯಕ್ರಮ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಬಾರ್, ಪಬ್ ಹಾಗೂ ಹೊಟೇಲ್ ಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. 1 ಗಂಟೆ ಬಳಿಕ ಯಾವುದೇ ಹೊಸ ವರ್ಷಾಚರಣೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವವರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇನ್ನು ಹೋಟೆಲ್, ಪಬ್, ರೆಸ್ಟೋರೆಂಟ್ ಗಳಲ್ಲಿ ಈಗಿರುವಷ್ಟೇ ಸೀಟುಗಳಿಗೆ ಮಾತ್ರ ಜನರಿಗೆ ಅವಕಾಶ ನೀಡಬೇಕು. ಹೊಸದಾಗಿ ಹೆಚ್ಚುವರಿ ಸೀಟ್ ವ್ಯವಸ್ಥೆಗಳನ್ನು ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.










