ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಮನ್ ಬಿ.ಮನೋಜ್‍ಗೆ ಪ್ರಥಮ ಸ್ಥಾನ…

83
firstsuddi

ಚಿಕ್ಕಮಗಳೂರು : ನಗರದ ಪ್ರತಿಷ್ಠಿತ ಅಂಬರ್ ವ್ಯಾಲಿ ವಸತಿ ಶಾಲೆಯಲ್ಲಿ ಕಾಫಿ ದೊರೆ ವಿ.ಜಿ.ಸಿದ್ದಾರ್ಥ ಅವರ ಸ್ಮರಣಾರ್ಥ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೇರಳದ ಕೊಚ್ಚಿನ್‍ನ ಅಮನ್ ಬಿ.ಮನೋಜ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಬೆಂಗಳೂರಿನ ವಿದ್ಯಾರ್ಥಿಗಳಾದ ಸಮೃದ್ ದ್ವಿತೀಯ ಹಾಗೂ ಜೋತ್ನ್ಸಾ ವಡಿವೇಲ್ ತೃತೀಯ ಸ್ಥಾನವನ್ನು ಗಳಿಸಿದರು. ಸ್ಪರ್ಧೆಯ ನಂತರ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಶಾಲೆಯ ಮುಖ್ಯ ಟ್ರಸ್ಟಿ ಐಶ್ವರ್ಯ ಡಿ.ಕೆ.ಎಸ್ ಹೆಗಡೆ ಮತ್ತು ಕಾಫಿ ಡೇ ಸಿಇಒ ಶಂಕರ ನಾರಾಯಣ್ ವಿಜೇತರಿಗೆ ಬಹುಮಾನ ವಿತರಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪಿಕ್ ಬ್ರೈನ್ ಎಂದು ಖ್ಯಾತರಾದ ಕ್ವಿಜ್ ಮಾಸ್ಟರ್ ಗಿರಿಬಾಲಸುಬ್ರಹ್ಮಣ್ಯಂ ಮತ್ತು ರಶ್ಮಿ ಪುಟಾಡೋ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು.

ಕೊಲ್ಕತ್ತಾ, ವಾರಣಾಸಿ, ಕೊಚ್ಚಿನ್, ದೆಹಲಿ, ಬೆಂಗಳೂರು, ಮೈಸೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಎರಡು ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಮೊದಲ ಸುತ್ತಿನ ಸ್ಪರ್ಧೆಯನ್ನು ಆನ್‍ಲೈನ್ ಮುಖಾಂತರ ನಡೆಸಿದರೆ 2ನೇ ಮತ್ತು ಅಂತಿಮ ಸುತ್ತಿನ ಸ್ಪರ್ಧೆಗಳನ್ನು ಕೆಫೆ ಕಾಫಿ ಡೇ ಮಳಿಗೆಗಳಲ್ಲಿ ನಡೆಸಲಾಯಿತು.

ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಐಪಾಡ್‍ಗಳನ್ನು ನೀಡಲಾಯಿತು.