ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜೋಡೋ ಯಾತ್ರೆ 12ನೇ ದಿನಕ್ಕೆ ಕಾಲಿಟ್ಟಿದ್ದು, ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಇಂದು ಬೆಳಗ್ಗೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಶೇಗಾಂವ್ ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ್ದಾರೆ.
ಈ ಕುರಿತ ಫೋಟೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ದೇಶ ಅಪಾಯವನ್ನು ಎದುರಿಸುತ್ತಿದ್ದಾಗ ಗಾಂಧಿ-ನೆಹರೂ ಯಾವಾಗಲೂ ಒಂದಾಗಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಹೇಳಿದೆ.
ಅಕೋಲಾ ಜಿಲ್ಲೆಯ ಬಾಳಾಪುರದ ಜಿಲ್ಲಾ ಪರಿಷತ್ ಶಾಲೆಯಿಂದ ಬೆಳಗ್ಗೆ 6 ಗಂಟೆಗೆ ಯಾತ್ರೆ ಆರಂಭವಾದ ಭಾರತ್ ಜೋಡೋ ಯಾತ್ರೆ ಕೆಲವು ಗಂಟೆಗಳ ನಂತರ ಅದು ಶೇಗಾಂವ್ ತಲುಪಿತು. ರಾಹುಲ್ ಗಾಂಧಿ ಇಂದು ಸಂಜೆ ಶೇಗಾಂವ್ ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿ ಕೊನೆಯ ಹಂತದಲ್ಲಿದ್ದು, ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.










