ಚಂಡೀಗಢ: ಮೂರು ಅಂತಸ್ತಿನ ರೈಸ್ ಮಿಲ್ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಹರಿಯಾಣದ ಕರ್ನಾಲ್‌ನಲ್ಲಿ ನಡೆದಿದೆ.
ಘಟನೆ ನಡೆದಾಗ ಕಟ್ಟಡದಲ್ಲಿ 150ಕ್ಕೂ ಹೆಚ್ಚು ಕಾರ್ಮಿಕರು ಇದ್ದರು ಎಂದು ವರದಿಗಳು ತಿಳಿಸಿವೆ. ಕಟ್ಟಡ ಕುಸಿದ ವೇಳೆ ಒಟ್ಟು 24 ಮಂದಿ ಸಿಲುಕಿಕೊಂಡಿದ್ದರು. ತಕ್ಷಣವೇ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಇದರಲ್ಲಿ ನಾಲ್ವರು ಸಾವಿಗೀಡಾಗಿದ್ದು, 20 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಕರ್ನಾಲ್ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ತಿಳಿಸಿದ್ದಾರೆ.
ಕಟ್ಟಡದ ರಚನೆಯು ಅಸುರಕ್ಷಿತವಾಗಿದ್ದು, ಕಟ್ಟಡ ಕುಸಿತಕ್ಕೆ ಇದೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕಾನೂನು ಪ್ರಕಾರ, ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.










