ನವದೆಹಲಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರೋಜ್‌ಗಾರ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 71 ಸಾವಿರಕ್ಕೂ ಅಧಿಕ ಮಂದಿ ಹೊಸ ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ.
ಇದು ಡಬಲ್ ಎಂಜಿನ್ ಸರ್ಕಾರಗಳ ಡಬಲ್ ಪ್ರಯೋಜನವಾಗಿದೆ. ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಅಭಿಯಾನವು ನಿರಂತರ ರೀತಿಯಲ್ಲಿ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ಆಯೋಜಿಸಿದ್ದ ಎರಡನೇ ‘ರೋಜ್‍ಗಾರ್ ಮೇಳ’ ಉದ್ದೇಶಿಸಿ ಮೋದಿ ನುಡಿದರು.
ಕೇಂದ್ರ ಸರ್ಕಾರ ಇನ್ನು 1 ವರ್ಷದಲ್ಲಿ 10 ಲಕ್ಷ ಉದ್ಯೊಗಿಗಳ ನೇಮಕ ಗುರಿ ಹೊಂದಿದೆ. ಈ ನಿಮಿತ್ತ ಕಳೆದ ಅಕ್ಟೊಬರ್ ನಲ್ಲಿ ಸಹ ಮೋದಿ ನೇಮಕಗೊಂಡ 75 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಇದರ 2ನೇ ಭಾಗವಾಗಿ ಇಂದು 71 ಸಾವಿರ ಜನರಿಗೆ ನೇಮಕಾತಿ ಪತ್ರವನ್ನು ವಿತರಿಸಿದ್ದಾರೆ.
ಇಂದು ಪ್ರಧಾನ ಮಂತ್ರಿಗಳು ‘ಕರ್ಮಯೋಗಿ ಪ್ರಾರಂಭ್’ ವಿಧಾನವನ್ನು ಕೂಡ ಉದ್ಘಾಟಿಸಿದರು. ಇದು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಿಗಾಗಿ ಆನ್ ಲೈನ್ ಓರಿಯಂಟೇಶನ್ ಕೋರ್ಸ್ ಆಗಿದೆ.










