ಬೆಂಗಳೂರು : ರೌಡಿಶೀಟರ್ ಬಬ್ಲಿ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ಕೋರಮಂಗಲ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಜೆ.ಸಿ.ನಗರ ಠಾಣೆಯ ರೌಡಿಶೀಟರ್ ರವಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಪ್ರದೀಪ್ ಗುಂಡೇಟು ತಿಂದ ಆರೋಪಿಗಳು.
ಜುಲೈ 19ರಂದು ಬಬ್ಲಿ ಪತ್ನಿಯೊಂದಿಗೆ ಕೋರಮಂಗಲ ಶಾಖೆಯ ಯುನಿಯನ್ ಬ್ಯಾಂಕ್ ಗೆ ಹೋಗಿದ್ದಾಗ ಏಕಾಏಕಿ ಬ್ಯಾಂಕ್ ಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿದ ಕೊಚ್ಚಿ ಬಬ್ಲಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ಪತ್ತೆ ಕಾರ್ಯ ಶುರುಮಾಡಿದ್ರು. ಈ ವೇಳೆ ಆರೋಪಿಗಳಾದ ರವಿ ಮತ್ತು ಪ್ರದೀಪ್ ಬೇಗೂರು ಕೆರೆ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಬೆಳಗ್ಗಿನ ಜಾವ ಸ್ಥಳಕ್ಕೆ ತೆರಳಿ ಬಂಧಿಸಲು ಹೋದಾಗ ಪಿಎಸ್ಐ ಸಿದ್ದಪ್ಪ ಹಾಗೂ ಎಎಸ್ಐ ರವೀಂದ್ರ ಎಂಬುವವರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ರವಿ ಹಾಗೂ ಪಿಎಸ್ಐ ಪುಟ್ಟಸಾಮಯ್ಯ ಇಬ್ಬರ ಕಾಲಿಗೆ ಶೂಟ್ ಮಾಡಿ ಬಂಧಿಸಿದ್ದಾರೆ.










