ಹೈದರಾಬಾದ್ : ರ‍್ಯಾಗಿಂಗ್‍ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ.
ಡಿ. ಪ್ರೀತಿ (26) ಸಾವನ್ನಪ್ಪಿದ ವಿದ್ಯಾರ್ಥಿನಿ. ಕಾಕತೀಯ ವೈದ್ಯಕೀಯ ಕಾಲೇಜಿನ(ಕೆಎಂಸಿ) ವಿದ್ಯಾರ್ಥಿನಿಯಾದ ಪ್ರೀತಿ ಸೀನಿಯರ್ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ಗೆ ಒಳಗಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಮನನೊಂದು ಪ್ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಗೆ ದಾಖಲಿಸಲಾಗಿತ್ತು. ಆದರೆ 4 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಪ್ರೀತಿಯ ತಂದೆಯ ದೂರಿನ ಮೇರೆಗೆ 2ನೇ ಸ್ನಾತಕೋತ್ತರ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ ನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಎಸ್ ಸಿ/ಎಸ್ ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಯ ವಿರುದ್ಧ ಕಾಲೇಜು ಮತ್ತು ಆಸ್ಪತ್ರೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರೀತಿಯ ತಂದೆ ಆರೋಪಿಸಿದ್ದಾರೆ.
ತೆಲಂಗಾಣ ಸರ್ಕಾರವು ವಿದ್ಯಾರ್ಥಿನಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ರಾಜ್ಯ ಸಚಿವರಿಂದ 20 ಲಕ್ಷ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಘೋಷಿಸಿದೆ.










