ಲಂಡನ್‌ನಲ್ಲಿ ರಾಹುಲ್ ನೀಡಿದ ಹೇಳಿಕೆ ವಿಚಾರವಾಗಿ ಸಂಸತ್‌ನಲ್ಲಿ ಗದ್ದಲ – ಕಲಾಪ ಮುಂದೂಡಿಕೆ…

48
firstsuddi

ನವದೆಹಲಿ : ಎರಡನೇ ಅವಧಿಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಸದನ ಆರಂಭವಾಗುತ್ತಿದ್ದಂತೆ ಗದ್ದಲಕ್ಕೆ ವೇದಿಕೆಯಾಯಿತು.

ರಾಹುಲ್ ಗಾಂಧಿ ಲಂಡನ್ ನಲ್ಲಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕರು, ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಬಿಜೆಪಿ ಆಗ್ರಹದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಸತ್ ನ ಉಭಯ ಸದನಗಳ ಕಲಾಪ ಮುಂದೂಡಿಕೆ ಮಾಡಲಾಯಿತು.

ಬಿಜೆಪಿ ಸಾರಥ್ಯದ ಕೇಂದ್ರದ ಎನ್ ಡಿಎ ಸರ್ಕಾರವು ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಕಲಾಪಗಳಲ್ಲಿ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತು. ಲಂಡನ್ ನ ಕೇಂಬ್ರಿಡ್ಜ್ ವಿವಿಯಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಹುಲ್ ಗಾಂದಿ ಅವರು ಲಂಡನ್ ನಲ್ಲಿ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕಿಡಿ ಕಾರಿದರು. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಈ ಸದನವು ಖಂಡಿಸಬೇಕು, ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸಬೇಕು ಎಂದು ರಾಜನಾಥ್ ಸಿಂಗ್ ಆಗ್ರಹಿಸಿದರು.

ಬಿಜೆಪಿ ನಾಯಕ, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಕೂಡಾ ರಾಹುಲ್ ಗಾಂಧಿ ಅವರು ದೇಶದ ಸಮಸ್ತ ಪ್ರಜೆಗಳ ಎದುರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇಡೀ ದೇಶವನ್ನು ರಾಹುಲ್ ಗಾಂಧಿ ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಖಂಡಿಸಿದರು.

ಇತ್ತೀಚೆಗೆ ಲಂಡನ್‌ನಲ್ಲಿ ಬ್ರಿಟಿಷ್ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ಗಳು ಆಗಾಗ್ಗೆ ಆಫ್ ಮಾಡಲಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.