ಚಿಕ್ಕಮಗಳೂರು : ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ವೈ.ಎಸ್.ವಿ.ದತ್ತ ಅವರಿಗೆ ಓರ್ವ ಅಭಿಮಾನಿ 101 ರೂಪಾಯಿ ಹಣ ನೀಡಿದ್ದಾರೆ.
ಕಳೆದ 50 ವರ್ಷಗಳಿಂದ ಜೆಡಿಎಸ್ ನ ಕಟ್ಟಾಳಾಗಿದ್ದ ವೈ.ಎಸ್.ವಿ.ದತ್ತ, ಕಳೆದ 2 ತಿಂಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಡೂರಿನ ಗಿರಿಯಾಪುರ ಮೂಲದ ಪರಿಸರ ಪ್ರೇಮಿ ಜಿ.ಕೆ ಭಾರ್ಗೇಶಪ್ಪ ಎಂಬ ಅಭಿಮಾನಿ ಪತ್ರ ಬರೆದು ಅಂಚೆ ಮೂಲಕ 101 ರೂಪಾಯಿ ಕಳುಹಿಸಿ ಚುನಾವಣೆಗೆ ಶುಭ ಕೋರಿದ್ದಾರೆ.
ಕ್ಷೇತ್ರ ಹಾಗೂ ಮತದಾರರ ಮೇಲೆ ನಿಮಗೆ ಇದ್ದ ಪ್ರೀತಿ, ಕಾಳಜಿ, ಅಭಿಮಾನ ಹಾಗೂ ನೀವು ಮಾಡಿದ ಅಭಿವೃದ್ಧಿ ನೆನಪಿನಲ್ಲಿ ಉಳಿಯುವಂತದ್ದು. ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ನಿಮಗಿರುವ ಮಳೆ ನೀರು ಶೇಖರಣೆ ಹಾಗೂ ಪ್ರಕೃತಿ ಉಳಿಸುವ ಪರಿಕಲ್ಪನೆ ಜನರನ್ನು ಆಕರ್ಷಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ನಿಮ್ಮ ವ್ಯಕ್ತಿತ್ವಕ್ಕೆ ಜನ ನಿಮ್ಮ ಜೊತೆಗಿದ್ದಾರೆ. ನಿಮಗೆ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸುವ ಹೊಸ ಜವಾಬ್ದಾರಿ ಇದೆ. ಅದನ್ನು ನಿರ್ವಹಿಸುತ್ತೀರಾ ಎಂದು ನಂಬಿದ್ದೇವೆ. ನಾನು ಆರ್ಥಿಕವಾಗಿ ಶಕ್ತಿವಂತನಲ್ಲ. ಹಾಗಾಗಿ, ನಿಮಗೆ ಚಿಕ್ಕ ಕಾಣಿಕೆ ನೀಡಿದ್ದೇನೆ. ನಮ್ಮ ಮನೆಯವರ ಎಲ್ಲಾ ಮತಗಳನ್ನು ನಿಮಗೆ ನೀಡುತ್ತೇವೆ. ಸಮಾನ ಮನಸ್ಕರಾದ ಜೊತೆ ಮಾತನಾಡಿ ತಮ್ಮ ಕೈ ಬಲಗೊಳ್ಳಲು ಸಹಕರಿಸುತ್ತೇವೆ ಎಂದು ಪತ್ರ ಬರೆದಿದ್ದಾರೆ.










