ಗಗನಸಖಿ ಸಾವಿನ ರಹಸ್ಯ ಬಯಲು – ಬಾಯ್​ಫ್ರೆಂಡ್ ಅರೆಸ್ಟ್…

60
firstsuddi

ಬೆಂಗಳೂರು : ಬಾಯ್​ಫ್ರೆಂಡ್​​ ನೋಡಲು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ ನಗರದ ಕೋರಮಂಗಲದಲ್ಲಿ ಬಹು ಮಹಡಿ ಅಪಾರ್ಟ್‌ಮೆಂಟ್‌ನಿಂದ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಅಪಾರ್ಟ್‌ಮೆಂಟ್‌ನಿಂದ ತಳ್ಳಿ ಪ್ರಿಯಕರನೇ ಹತ್ಯೆ ಮಾಡಿರುವ ವಿಷಯ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್ ಆಗಿದ್ದ ಕೇರಳದ ಆದೇಶ್, ಗಗನಸಖಿ 28 ವರ್ಷದ ಅರ್ಚನಾ ಮಧ್ಯೆ ಮೂರು ವರ್ಷಗಳ ಹಿಂದೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಪ್ರಿಯಕರ ಆದೇಶ್, ಪ್ರಿಯತಮೆ ಅರ್ಚನಾಳ ಜೊತೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದ. ಆದೇಶ್ ಮೊದಲಿನಂತೆ ಮಾತನಾಡದ್ದಕ್ಕೆ ಬೇಸರಗೊಂಡಿದ್ದ ಹಿಮಾಚಲ ಪ್ರದೇಶದ ಮೂಲದ ಅರ್ಚನಾ ದುಬೈನಿಂದ ಗೆಳೆಯನನ್ನು ನೋಡಲು ಬೆಂಗಳೂರಿಗೆ ಬಂದಿದ್ದಳು.

ಮಾರ್ಚ್ 10 ರಂದು ಅರ್ಚನಾ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಜೋರು ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ಹೋಗಿದ್ದರಿಂದ ರಾತ್ರಿ 12 ಗಂಟೆಯ ವೇಳೆಗೆ ಆದೇಶ್, ಅರ್ಚನಾಳನ್ನು ಅಪಾರ್ಟ್‌ಮೆಂಟ್‌ನಿಂದ ತಳ್ಳಿದ್ದ. ಪರಿಣಾಮ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಅರ್ಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

ಬಳಿಕ ಆದೇಶ್, ನಶೆಯಲ್ಲಿ ಬಿಲ್ದಿಂಗ್ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಆಕೆಯ ತಂದೆಗೆ ಕರೆ ಮಾಡಿ ಹೇಳಿದ್ದ. ಅಲ್ಲದೇ ಪೊಲೀಸರಿಗೂ ಇದೇ ಹೇಳಿದ್ದ. ಆದರೆ ಮೃತ ಯುವತಿ ತಂದೆ ದೇವರಾಜ್ ಅವರು ಬಹುಮಹಡಿ ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಆದೇಶ್ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನೀಡಿದ್ದರು. ಈಗ ಪೊಲೀಸರು ಆದೇಶ್ ನನ್ನು ಬಂಧಿಸಿದ್ದು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.