ಲಾಲ್‍ಬಾಗ್‍ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಪುಷ್ಪಗಳಲ್ಲಿ ಅರಳಲಿದ್ದಾರೆ ಮಹರ್ಷಿ ವಾಲ್ಮೀಕಿ.

30

ಬೆಂಗಳೂರು: 76ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಪುಷ್ಪ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ರಾಮಾಯಣದ ಕತೃ ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಇಂದಿನಿಂದ ನಡೆಯುವ 217ನೇ ಫಲಪುಷ್ಪ ಪ್ರದರ್ಶನ ಕುರಿತಂತೆ ತೋಟಗಾರಿಕಾ ಇಲಾಖೆಯ ವರದಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ನಿರ್ದೇಶಕ ಡಿ.ಎಸ್ ರಮೇಶ್, ಫಲ ಪುಷ್ಪ ಪ್ರದರ್ಶನಕ್ಕೆ ಪ್ರತಿಯೊಂದು ಬಾರಿಯೂ ಒಂದೊಂದು ರೀತಿಯ ವಿಷಯಾಧಾರಿತ ವಸ್ತುನ್ನು ಆಯ್ಕೆ ಮಾಡಲಾಗುತ್ತಿದೆ. ಆದ್ರೂ ಸಹ ಪ್ರಸಕ್ತ ವರ್ಷ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಪರಿಸರವಾದಿ ಯಲ್ಲಪ್ಪರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ವಾಲ್ಮೀಕಿ ಕುರಿತು ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಸೂಚಿಸಿದ್ದರು ಎಂದು ತಿಳಿಸಿದರು. ಪ್ರದರ್ಶನಕ್ಕೆ ಬರುವವರಿಗೆ ಇದೇ ಮೊದಲ ಬಾರಿಗೆ ಕ್ಯೂಆರ್ ಕೋಡ್‍ನ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ, ಲಾಲ್ ಬಾಗ್ ಈವರೆಗೂ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಆಫ್ ಲೈನ್ ಮತ್ತು ಆನ್ ಲೈನ್‍ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. 4 ದ್ವಾರಗಳಲ್ಲಿ ಟಿಕೆಟ್ ಕೌಂಟರ್‍ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ ಇದೇ ಮೊದಲ ಬಾರಿಗೆ ಕ್ಯೂ.ಆರ್ ಕೋಡ್ ಮೂಲಕ ಪ್ರದರ್ಶನನಕ್ಕೆ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ನಗರದ ಬಸ್ ನಿಲ್ದಾಣಗಳು, ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ಯೂ.ಆರ್ ಕೋಡ್ ಸ್ಟಿಕ್ಕರ್ ಅಂಟಿಸುವ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.