ಬೆಂಗಳೂರು: ಸಮುದಾಯಗಳ ಸಭೆಗಳನ್ನು ಪಕ್ಷವೇ ಮಾಡಲಿ. ಅದರಲ್ಲಿ ತಪ್ಪೇನಿದೆ, ನಮಗೆ ನಮ್ಮ ಸಮಸ್ಯೆ ಬಗೆಹರಿಯಬೇಕು. ನಾವೇ ಪಕ್ಷ, ನಾವಿದ್ದರೆ ಪಕ್ಷ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನಸಮುದಾಯ ಕಟ್ಟಿರುವ ಪಕ್ಷ ಅಲ್ಲವೇ ಕಾಂಗ್ರೆಸ್. ಕಾಂಗ್ರೆಸ್ ಪಕ್ಷವೇ ಒಂದು ಆಂದೋಲನ. ನಮ್ಮದು ಕೇಡರ್ ಪಾರ್ಟಿ ಅಲ್ಲ ಎಂದು ಹೇಳಿದರು. ಮಾರ್ಚ್ ತಿಂಗಳಲ್ಲಿ ರಾಜಕೀಯ ಸ್ಥಿತ್ಯಂತರ ಆಗುವ ಕುರಿತು ನನಗೆ ಗೊತ್ತಿಲ್ಲ. ನನಗೆ ಶಾಸ್ತ್ರ ಹೇಳೋಕೆ ಬರಲ್ಲ. ಜ್ಯೋತಿಷಿ ಆಗಿದ್ದರೆ ನಾನು ಹೇಳುತ್ತಿದ್ದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಮತ್ತೆ ದಲಿತ ಸಚಿವರು ಸಭೆ ಸೇರುವ ವಿಚಾರದ ಕುರಿತು ಚರ್ಚೆ ಮಾಡಿಲ್ಲ. ನಾವೆಲ್ಲ ಸಚಿವರು ಸೇರಿ ಚರ್ಚೆ ಮಾಡಿ, ಮುಂದೆ ಏನು ಅಂತ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ದಲಿತರ ಸಭೆ ಕುರಿತು ಸುರ್ಜೇವಾಲ ಬೇಸರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಿ. ಪರಮೇಶ್ವರ್, ಪ್ರಧಾನ ಕಾರ್ಯದರ್ಶಿಗಳು ಹೇಳಿ ಹೋಗಿದ್ದಾರೆ. ನಾವು ಸ್ವಲ್ಪ ಮಾತು ಕಡಿಮೆ ಮಾಡುತ್ತೇವೆ. ನಾವು ಸಮಸ್ಯೆ ಬಗೆಹರಿಸುವುದಕ್ಕೆ ಮಾಡುತ್ತಿರುವುದು. ಯಾರು ಹೇಗೆ ವ್ಯಾಖ್ಯಾನ ಮಾಡುತ್ತಾರೆ ಮಾಡಲಿ ಎಂದು ಹೇಳಿದರು. ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ವಿಚಾರದ ಕುರಿತು ಸಚಿವ ಆರ್.ಬಿ ತಿಮ್ಮಾಪೂರ ನಾನು ಆಕಾಂಕ್ಷಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು 30 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ. ಅವರಿಗೂ ಸಾಮಥ್ರ್ಯ ಇದೆ. ಅವರು ಕೇಳುತ್ತಿರುವುದರಲ್ಲಿ ತಪ್ಪು ಏನಿದೆ ಎಂದು ಪ್ರಶ್ನಿಸಿದರು.










