ಡೆಹ್ರಾಡೂನ್ : ಲಿಫ್ಟ್ ಕೊಡುವ ನೆಪದಲ್ಲಿ ತಾಯಿ ಮತ್ತು 6 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹರಿದ್ವಾರದ ರೂರ್ಕಿಯಲ್ಲಿ ನಡೆದಿದೆ.
ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಮುಸ್ಲಿಂ ಧಾರ್ಮಿಕ ಸ್ಥಳವಾದ ಪಿರಾನ್ ಕಲಿಯಾರ್ ನಿಂದ ಮನೆಗೆ ಹೋಗುತ್ತಿದ್ದಾಗ, ಸೋನು ಎಂಬ ವ್ಯಕ್ತಿ ಲಿಫ್ಟ್ ನೀಡುವ ನೆಪದಲ್ಲಿ ಕೃತ್ಯವೆಸಗಿದ್ದಾನೆ. ಇದೇ ವೇಳೆ ಸೋನು ಜೊತೆಗೆ ಕಾರಿನಲ್ಲಿದ್ದ ಕೆಲವು ಸ್ನೇಹಿತರು ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಮಾತನಾಡಿ, ಸೋನು ಮತ್ತು ಆತನ ಸಹಚರರು ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಇಬ್ಬರನ್ನೂ ಕಾಲುವೆಯ ಬಳಿ ಎಸೆದಿದ್ದಾರೆ. ಮಹಿಳೆ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ಘಟನೆಯನ್ನು ವಿವರಿಸಿದರು ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರಿನಲ್ಲಿ ಎಷ್ಟು ಪುರುಷರು ಇದ್ದರು ಎಂದು ಮಹಿಳೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ, ಆದರೆ ಅದನ್ನು ಓಡಿಸುವ ವ್ಯಕ್ತಿಯ ಹೆಸರು ಸೋನು ಎಂದು ಹೇಳಿದರು. ಇಬ್ಬರನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.










