ಶಿವಮೊಗ್ಗ : ಪ್ರೀತಿಸಿದ ಹುಡುಗಿ ಕೈಕೊಟ್ಟಳೆಂದು ಮನನೊಂದ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದಲ್ಲಿ ನಡೆದಿದೆ.
ದಿಲೀಪ್ (26) ಆತ್ಮಹತ್ಯೆಗೆ ಶರಣಾದ ಯುವಕ. ಈತ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯವನು. ಕೆಲವು ವರ್ಷಗಳಿಂದ ದಿಲೀಪ್ ಮತ್ತು ಕುಟುಂಬಸ್ಥರು ಬೆಂಗಳೂರಿನಲ್ಲಿ ವಾಸವಾಗಿದ್ದರು. ದಿಲೀಪ್ ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಯುವಕನಿಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದ ಯುವತಿಯೋರ್ವಳ ಪರಿಚಯವಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. ನಂತರದ ದಿನಗಳಲ್ಲಿ ಯುವತಿಗೆ ಏನಾಯಿತೋ ಗೊತ್ತಿಲ್ಲ ತಾಯಿಗೆ ಅನಾರೋಗ್ಯದ ನೆಪ ಹೇಳಿ ಬೆಂಗಳೂರಿನಿಂದ ತವರಿಗೆ ಬಂದಿದ್ದಾಳೆ. ಅಲ್ಲದೆ, ದಿಲೀಪ್ ನೊಂದಿಗೆ ಅಂತರ ಕಾಯ್ದುಕೊಂಡಿದ್ದಳಂತೆ.
ಯುವತಿಯು ತನ್ನಿಂದ ಅಂತರ ಕಾಯ್ದುಕೊಂಡಿದ್ದಾಳೆ, ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸೆಲ್ಫಿ ವಿಡಿಯೋ ಮಾಡಿ ಯುವತಿ ವಾಸವಿರುವ ಸೊರಬ ತಾಲೂಕಿನ ಬೆಟ್ಟದಕೂರ್ಲಿ ಗ್ರಾಮದ ಕೆರೆಯ ಏರಿ ಮೇಲೆ ವಿಷ ಸೇವಿಸಿದ್ದಾನೆ. ವಿಷ ಕುಡಿದು ಬಿದ್ದಿದ್ದ ದಿಲೀಪ್‍ನನ್ನು ಕಂಡ ಸ್ಥಳೀಯರು ಕೂಡಲೇ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಿದ್ದರೂ ಆತ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










