ಹೈದರಾಬಾದ್: ಹಣಗಳಿಸುವ ಸಲುವಾಗಿ ಮದುವೆ ಎಂಬ ಪವಿತ್ರ ಬಂಧವನ್ನು ಅಸ್ತ್ರವಾಗಿಸಿಕೊಂಡ ವ್ಯಕ್ತಿಯೊಬ್ಬ, ಹಲವಾರು ಹೆಣ್ಣು ಮಕ್ಕಳನ್ನು ವಂಚಿಸಿದ ಘಟನೆ ತೆಲಂಗಾಣದಿಂದ ವರದಿಯಾಗಿದೆ. ವಿಶೇಷ ಮತ್ತು ವಿಚಿತ್ರ ಎಂದರೆ, ಆತ ಈ ಕೃತ್ಯದ ಜಾಲ ಬಯಲಾಗಬಾರದು ಎಂಬುದಕ್ಕೆ ತುಂಬ ವಿಗ್‍ಗಳನ್ನು ಬಳಸಿಕೊಂಡು ತನ್ನ ನೋಟವನ್ನು ಮರೆಮಾಚುವ ಯತ್ನ ನಡೆಸಿದ್ದ. ಅಷ್ಟೇ ಅಲ್ಲ ತಾನು ಮದುವೆಗೆ ತಕ್ಕ ವರ ಎಂದು ಬಿಂಬಿಸಿಕೊಂಡು ಹೆಣ್ಣು ಮಕ್ಕಳಿದ್ದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತಿದ್ದ. ಕುಟುಂಬವೊಂದು ತಮ್ಮ ಒಬ್ಬಳೇ ಮಗಳಿಗೆ ಆನ್‍ಲೈನ್ ಮೂಲಕ ಗಂಡು ಪತ್ತೆ ಮಾಡುತ್ತಿದ್ದಾಹ ಈ ನಕಲಿ ಗಂಡಿನ ಮದುವೆ ವಂಚನೆ ಹಗರಣ ಬೆಳಕಿಗೆ ಬಂದಿದೆ. ಆನ್‍ಲೈನ್ ಮದುವೆ ತಾಣದಲ್ಲಿ ಈತನ ಪ್ರೊಫೈಲ್ಮೆ ಮೆಚ್ಚಿದ ಕುಟುಂಬ ಮದುವೆಗೆ ಸಿದ್ಧತೆ ಕೂಡಾ ನಡೆಸಿತ್ತು. ವಧುವಿನ ಕುಟುಂಬದ ನಂಬಿಕೆ ಗಳಿಸಿದ ವರ ಆಭರಣ ಮತ್ತು ಮದುವೆ ಖರ್ಚಿಗಾಗಿ 25 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಅಲ್ಲದೇ ವಾಟ್ಸ್ ಆ್ಯಪ್ ಮೂಲಕ ಆಭರಣದ ಚಿತ್ರವನ್ನು ಹಂಚಿಕೊಂಡು ಇವುಗಳನ್ನು ನಿಜ ಎಂಬಂತೆ ತೋರಿಸಿಕೊಂಡಿದ್ದ. ದಿನಕಳೆದಂತೆ ವರನ ಕುರಿತು ಘೋರ ಸತ್ಯವೊಂದು ಹೊರ ಬಂದಿದ್ದು, ಕುಟುಂಬಸ್ಥರು ಆಘಾತಕ್ಕೆ ಒಳಗಾದರು. ವರ ಈಗಾಗಲೇ ಎರಡು ಮಕ್ಕಳ ತಂದೆಯಾಗಿದ್ದು, ಕ್ರಿಮಿನಲ್ ಹಿನ್ನೆಲೆ ಕೂಡ ಹೊಂದಿದ್ದ. ಇದನ್ನು ತಿಳಿದು ವಧುವಿನ ಕುಟುಂಬ ಮದುವೆ ರದ್ದು ಮಾಡಿ, ಹಣ ಹಿಂದಿರುಗಿಸುವಂತೆ ಕೋರಿದೆ. ಆದರೆ ವರ ಚೆಕ್ ನೀಡುವ ಮೂಲಕ ವಂಚನೆ ಮಾಡಿದ್ದಾನೆ.










