ಕೊಪ್ಪಳ: ವೈಭವದಿಂದ ಕೊಪ್ಪಳ ಗವಿಮಠದ ತೆಪ್ಪೋತ್ಸವ ಜರುಗಿತು. ನಗರದಲ್ಲಿರುವ ಸುಪ್ರಸಿದ್ದ ಗವಿಮಠ, ತನ್ನ ವೈಚಾರಿಕ, ಜನಪರ ಕೆಲಸಗಳು, ದಾಸೋಹದಿಂದ ನಾಡಿನಲ್ಲಿ ದೊಡ್ಡ ಹೆಸರು ಮಾಡಿದೆ. ಗವಿಮಠದ 11 ಪೀಠಾದಿಪತಿಯಾಗಿದ್ದ ಗವಿಸಿದ್ದೇಶ್ವರರ ಸ್ಮರಣಾರ್ಥ ಪ್ರತಿವರ್ಷ ಅದ್ದೂರಿಯಾಗಿ ಜಾತ್ರೆಯನ್ನು ನಡೆಸಲಾಗುತ್ತದೆ. ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಅಂತಲೇ ಹೇಳುತ್ತಾರೆ. ಈ ಜಾತ್ರೆಗೆ ಲಕ್ಷಾಂತರ ಜನ ಬರುತ್ತಾರೆ. ಈ ವರ್ಷ ಜ.15 ರಂದು ಮಹಾರಥೋತ್ಸವ ನಡೆಯಲಿದೆ. ಅದರ ಮೊದಲ ಭಾಗವಾಗಿ ಮಠದ ಆವರಣದಲ್ಲಿರುವ ಕೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ ಮತ್ತು ಗಂಗಾರತಿ ನಡೆಸಲಾಯಿತು. 2017 ರಿಂದ ಮಠದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದರೆ, ಕಳೆದ 3 ವರ್ಷಗಳಿಂದ ಕಾಶಿ ಮಾದರಿಯಲ್ಲಿ ಗಂಗಾರತಿ ನಡೆಯುತ್ತಿದೆ. ಈ ವರ್ಷವೂ ಅದ್ದೂರಿಯಾಗಿ ಗಂಗಾರತಿ ನಡೆಸಲಾಯಿತು. ಮಠದ ಅರ್ಚಕರ ತಂಡ, ಸರಿಸುಮಾರು ಅರ್ಧಗಂಟೆ ಕಾಲ, ಕೆರೆಯ ದಡದಲ್ಲಿ ವಾದ್ಯಘೋಷಗಳ ಜೊತೆ ಗಂಗಾರತಿ ಮಾಡುತ್ತಿದ್ದರೆ, ಕಾಶಿಯಲ್ಲಿ ಗಂಗಾರತಿ ನೋಡಿದ ಅನುಭವ ಭಕ್ತರು ಪಡೆದರು. ಗಂಗಾರತಿ ಬಳಿಕ ತೆಪ್ಪೋತ್ಸವ ಜರುಗಿತು. ಮಠದ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಅದ್ದೂರಿಯಾಗಿ ಪಲ್ಲಕ್ಕಿಯಲ್ಲಿ ತೆಗದುಕೊಂಡು ಬಂದು, ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಸಲಾಯಿತು. ಅಲಂಕೃತ ತೆಪ್ಪದಲ್ಲಿ ಗವಿಸಿದ್ದೇಶ್ವರರ ಉತ್ಸವ ಮೂರ್ತಿ ಸಾಗುತ್ತಿದ್ದರೆ, ಭಕ್ತರು ಗವಿಸಿದ್ದೇಶ್ವರ ಮಹರಾಜ್ ಕಿ ಜೈ, ಗವಿಸಿದ್ದೇಶ್ವರ ಪಾಹಿಮಾಮ್ ಅಂತ ಘೋಷಣೆ ಕೂಗಿ, ಭಕ್ತಿಯಿಂದ ನಮಸ್ಕರಿಸಿದರು.










