ಬೆಂಗಳೂರು : ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರುತ್ತೇವೆ. ಈಗಾಗಲೇ ಕನ್ನಡ ಕಡ್ಡಾಯ ಮಸೂದೆ ಮಂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಾನೂನುಬದ್ಧವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 67 ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನಮ್ಮ ಮಾತೃಭಾಷೆಯೂ ಹೌದು, ನಮ್ಮ ರಾಷ್ಟ್ರಭಾಷೆಯೂ ಹೌದು. ಕನ್ನಡಕ್ಕೆ ಕಾನೂನಿನ ಕವಚವನ್ನು ಕೊಟ್ಟಿರುವ ಪ್ರಪ್ರಥಮ ಸರ್ಕಾರ ನಮ್ಮದು. ಈ ಕಾನೂನಿನ ಬಗ್ಗೆ ವ್ಯಾಖ್ಯಾನ, ಸಾರ್ವಜನಿಕವಾಗಿ ಮುಕ್ತ ಚರ್ಚೆಗಳಾಗಲಿ, ಸರ್ಕಾರ ಎಲ್ಲರ ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಲಾಗುವುದು. ಕನ್ನಡ ಕಾನೂನನ್ನು ಮಾಡುವುದು ಒಂದು ಹಂತವಾದರೆ, ಕನ್ನಡಕ್ಕಾಗಿ ಬದುಕಬೇಕೆನ್ನುವ ಭಾವ ಹೃದಯಾಂತರಾಳದಿಂದ ಬರಬೇಕು. ಕನ್ನಡ ನಮ್ಮ ಅಂತರಂಗದಲ್ಲಿ, ರಾಜ್ಯದೆಲ್ಲೆಡೆ ಡಿಂಡಿಮವನ್ನು ಬಾರಿಸಲಿ. ನವಕರ್ನಾಟಕದ ನಿರ್ಮಾಣದಿಂದ ನವಭಾರತ ನಿರ್ಮಾಣವಾಗಲಿ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಸುಮಾರು 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುತ್ತಿದ್ದೇವೆ. ಗ್ರಾಮೀಣ ಭಾಗದ ಯುವಕರಿಗೆ ಔದ್ಯೋಗಿಕ ನೆರವಿಗೆ ಮುಂದಾಗಿದ್ದೇವೆ. ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಅದನ್ನು 2 ವರ್ಷದಲ್ಲಿ ತುಂಬಲು ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದರು.
ಕರ್ನಾಟಕದಲ್ಲಿ ಹತ್ತು ಕೃಷಿ ವಲಯಗಳಿವೆ. ಈ ವರ್ಷ ಕೆರೆಕಟ್ಟೆಗಳು ತುಂಬಿವೆ. ಪ್ರವಾಹದಿಂದ ಜನರಿಗೆ ಅನಾನುಕೂಲವಾಗಿದೆ. ಆದರೆ ದೀರ್ಘಕಾಲ ಅಂತರ್ಜಲ ಕುಸಿದಿರುವ ಕಡೆಗಳಲ್ಲಿಯೂ ಅಂತರ್ಜಲ ಮೇಲೇರಿದೆ. 3-4 ವರ್ಷಗಳ ಕಾಲ ನೀರಿನ ಬವಣೆ ತಪ್ಪಿದೆ. ರೈತರ ನೆರವಿಗೆ ಪರಿಹಾರ ದುಪ್ಪಟ್ಟು ಮಾಡಿದೆ. ಮನೆಗಳಿಗೆ ಪರಿಹಾರ ನೀಡಿದೆ. ಸಂಕಷ್ಟವಿದ್ದ ಕಡೆ ಸರ್ಕಾರ ಧಾವಿಸಿದೆ. ಸರ್ಕಾರದ ಜೀವಂತಿಕೆಯನ್ನು ನಾವು ತೋರಿಸಿದ್ದೇವೆ ಎಂದರು.










