ಬೆಂಗಳೂರು : ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡುತ್ತೇವೆ. ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಬಗ್ಗೆ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಒಬಿಸಿ ಮೀಸಲಾತಿ ಮಾಡಲೇಬೇಕಿದೆ.
ಹೀಗಾಗಿ ಸುಪ್ರೀಂಕೋರ್ಟ್ ಗೆ ಎರಡು ವಿಚಾರವಾಗಿ ಮನವಿ ಮಾಡಲಾಗುತ್ತದೆ. ಈಗಾಗಲೇ ರಚಿಸಲಾಗಿರುವ ಸಮಿತಿ ತನ್ನ ವರದಿ ಸಲ್ಲಿಸಲು ಸಮಯಾವಕಾಶ ನೀಡುವಂತೆ ಅಥವಾ ಹಳೆಯ ಮೀಸಲಾತಿ ಪ್ರಕಾರ ಚುನಾವಣೆ ಮಾಡಲು ಅವಕಾಶ ನೀಡುವಂತೆ ಕೋರಲಾಗುತ್ತದೆ. ಇದಕ್ಕೆ ಬಹುತೇಕ ಅವಕಾಶ ಸಿಗುವ ಭರವಸೆ ಇದೆ ಎಂದು ತಿಳಿಸಿದರು.










