ನವದೆಹಲಿ : ನೀಟ್ ಪಿಜಿ (NEET PG 2022) ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು, ಪರೀಕ್ಷೆಯನ್ನು ಮುಂದೂಡುವುದರಿಂದ ವೈದ್ಯರ ಅಲಭ್ಯತೆಯಾಗಿ ರೋಗಿಗಳ ಆರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅವರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಸಾಂಕ್ರಾಮಿಕ ರೋಗದಿಂದಾಗಿ ಹಳಿತಪ್ಪಿದ ದೇಶವು ಮತ್ತೆ ಹಳಿಗಳ ಮೇಲೆ ಬರುತ್ತಿದ್ದಂತೆ, ಈ ನ್ಯಾಯಾಲಯ ನಿಗದಿಪಡಿಸಿದ ಸಮಯ ವೇಳಾಪಟ್ಟಿಯನ್ನು ಅನುಸರಿಸಬೇಕು ಎಂದು ಪೀಠ ಹೇಳಿದೆ. ಸದ್ಯ ನಡೆಯುತ್ತಿರುವ NEET PG 2021ರ ಕೌನ್ಸೆಲಿಂಗ್ನೊಂದಿಗೆ ಕ್ಲ್ಯಾಶ್ ಆಗುವ ಕಾರಣಕ್ಕೆ ಮೇ 21ರಂದು ನಡೆಯಲಿರುವ (NEET PG) 2022ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ವೈದ್ಯರು ಅರ್ಜಿ ಸಲ್ಲಿಸಿದ್ದರು.










