ಗುಡ್ ಜರ್ಮನ್ ಮತ್ತು ಸ್ಪೀಡ್ ರೇಸರ್ ಖ್ಯಾತಿಯ ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ವಿಮಾನ ದುರ್ಘಟನೆಯಲ್ಲಿ ನಿಧನರಾಗಿದ್ದಾರೆ.
ಪ್ರವಾಸಕ್ಕೆಂದು ತಮ್ಮ ಇಬ್ಬರು ಹೆಣ್ಣು ಮಕ್ಕಳೊಡನೆ ತೆರಳಿದ್ದ ವೇಳೆ ಈ ಅಪಘಾತ ನಡೆದಿದ್ದು, ಅಪಘಾತದಲ್ಲಿ ಕ್ರಿಶ್ಚಿಯನ್ ಆಲಿವರ್ ಜೊತೆಗೆ ಮಕ್ಕಳಾದ 12 ವರ್ಷದ ಅನ್ನಿಕ್ ಹಾಗೂ 10 ವರ್ಷದ ಮ್ಯಾಡಿಟಾ ಬಾಲಕಿಯರು ಸಹ ನಿಧನ ಹೊಂದಿದ್ದಾರೆ.
ಪತ್ನಿಯಿಂದ ಕೆಲ ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದ ನಟ ಕ್ರಿಶ್ಚಿಯನ್ ಆಲಿವರ್ ಹೊಸ ವರ್ಷಕ್ಕೆ ತಮ್ಮಿಬ್ಬರು ಮಕ್ಕಳನ್ನು ಕರೆದುಕೊಂಡು ಕೆರೆಬಿಯನ್ನ ದ್ವೀಪಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಗುರುವಾರ ಸಿಂಗಲ್ ಎಂಜಿನ್ ವಿಮಾನದಲ್ಲಿ ಕ್ರಿಶ್ಚಿಯನ್ ಆಲಿವರ್ ತಮ್ಮ ಮಕ್ಕಳೊಡನೆ ಪೆಟಿಟ್ ನೇವೀಸ್ ದ್ವೀಪದಲ್ಲಿ ಹಾರಾಟ ನಡೆಸಿದ್ದರು.
ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡು ಕೆರೆಬಿಯನ್ ಸಮುದ್ರಕ್ಕೆ ಬಿದ್ದಿದೆ. ಇದರಿಂದಾಗಿ ಪೈಲೆಟ್ ಸೇರಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನೌಕಾದಳದ ಸಹಾಯದ ಮೂಲಕ ಮೃತರ ದೇಹವನ್ನು ಹೊರತೆಗೆದಿದ್ದಾರೆ.
ಕ್ರಿಶ್ಚಿಯನ್ ಆಲಿವರ್ 1994ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಸೇವ್ಡ್ ಬೈ ದಿ ಬುಲ್’. ಆಲಿವರ್ ಅವರು ಜಾರ್ಜ್ ಕ್ಲೂನಿ ಅವರೊಂದಿಗೆ “ದಿ ಗುಡ್ ಜರ್ಮನ್” ಮತ್ತು 2008 ರಲ್ಲಿ ಆಕ್ಷನ್-ಕಾಮಿಡಿ “ಸ್ಪೀಡ್ ರೇಸರ್” ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. 2023ರಲ್ಲಿ ಬಿಡುಗಡೆ ಆದ ‘ಇಂಡಿಯಾನಾ ಜೋನ್ಸ್’ ಸಿನಿಮಾಗಳಲ್ಲಿ ಕ್ರಿಶ್ಚಿಯನ್ ಆಲಿವರ್ ನಟಿಸಿದ್ದಾರೆ.
ಕ್ರಿಶ್ಚಿಯನ್ ಆಲಿವರ್ ಅಗಲಿಕೆಗೆ ಹಲವು ಹಾಲಿವಡ್ ನಟ, ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.










