ವಿವಾಹಿತೆ ಮಹಿಳೆ ಅನುಮಾನಾಸ್ಪದ ಸಾವು- ಪತಿಯೇ ಕೊಲೆ ಮಾಡಿದ್ದಾನೆಂದು ಪೋಷಕರು ಗಂಭೀರ ಆರೋಪ…

50
firstsuddi

ಹಾಸನ: ವಿವಾಹಿತೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಸುರಭಿ (24) ಮೃತ ಮಹಿಳೆ. ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ಹುಣಸೂರಿನ ಸುರಭಿಯನ್ನು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣು ಮಗುವಿದ್ದು, ಪತಿ ದರ್ಶನ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಮಗಳು ಲೋ ಬಿಪಿಯಿಂದ ಮೃತಪಟ್ಟಿದ್ದಾಳೆಂದು ದರ್ಶನ್ ಸುರಭಿ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಆದರೆ ಸುರಭಿ ಪೋಷಕರು ಇದನ್ನು ಒಪ್ಪಲು ಸಾಧ್ಯವಿಲ್ಲ. ಆರೋಗ್ಯವಂತಳಾಗಿದ್ದಳು ಯಾವುದೇ ಲೋ ಬಿಪಿ ಅನಾರೋಗ್ಯ ಇರಲಿಲ್ಲ. ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ. ಸುರಭಿ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.