ವಿಶ್ವ ಅಂಗಾಂಗ ದಾನ ದಿನಾಚರಣೆ : ಅಂಗಾಂಗ ದಾನಕ್ಕೆ ಸಿಎಂ ಬೊಮ್ಮಾಯಿ ಹೆಸರು ನೋಂದಣಿ…

129
firstsuddi

ಬೆಂಗಳೂರು : ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ವಿಶ್ವ ಅಂಗಾಂಗ ದಾನ ದಿನಾಚರಣೆ ಹಿನ್ನೆಲೆ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಲಾದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ವಿಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ವ್ಯಕ್ತಿ ಸತ್ತ ಮೇಲೂ ಅವನ ಅಂಗಾಂಗಳನ್ನು ದಾನ ಮಾಡಿ ಮತ್ತೊಬ್ಬರ ಜೀವಕ್ಕೆ, ಜೀವನಕ್ಕೆ ನೆರವಾಗಬಹುದು. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಜೀವಗಳನ್ನು ಉಳಿಸಬಹುದು. ಚರ್ಮದಿಂದ ಹಿಡಿದು ಎಲ್ಲಾ ಅಂಗಾಂಗ ದಾನ ಮಾಡಬಹುದು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದಕಬಹುದು. ಅಂಗಾಂಗಳ ದಾನ ಮಾಡುವ ಮೂಲಕ ಸತ್ತ ನಂತರವೂ ಜೀವಂತವಾಗಿರಬಹುದು, ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡಿದ್ದೇನೆ ಎಂದರು.

ರಾಜ್ಯಾದ್ಯಂತ 18 ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಅಂಗಾಂಗ ದಾನ ಮಾಡಲು ಇಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಿಎಂ ಹೇಳಿದರು.