ಬೆಂಗಳೂರು : ವ್ಯವಹಾರದ ಮಾತುಕತೆಗೆ ಎಂದು ಕರೆಯಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಆರೋಪಿಯನ್ನು ತಮಿಳುನಾಡು ಮೂಲದ ರಮೇಶ್(54) ಎಂದು ಗುರುತಿಸಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅತ್ಯಾಚಾರದ ಬಳಿಕ ಈ ಬಗ್ಗೆ ಯಾರಿಗೂ ಹೇಳದಂತೆ ಆತ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಬೆಂಗಳೂರು ಮೂಲದ ಸಂತ್ರಸ್ತೆಗೆ ಆರೋಪಿ ಚಿಕ್ಕವಯಸ್ಸಿನಿಂದ ಪರಿಚಯವಿತ್ತು. ತಂದೆ ಸಮಾನನಾಗಿದ್ದ ಆರೋಪಿಯು ತಮಿಳುನಾಡಿನಲ್ಲಿ ನೆಲೆಸಿದ್ದ. ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯು ಒಟಿಟಿ ಆರಂಭಿಸಲು ಮುಂದಾಗಿತ್ತು. ಇದಕ್ಕಾಗಿ ಹಣ ಹೂಡುವವರನ್ನು ಹುಡುಕಾಟ ನಡೆಸುತಿತ್ತು. ಮಹಿಳೆಗೆ ಸಹ ಹೂಡಿಕೆದಾರರಿದ್ದರೆ ತಿಳಿಸುವಂತೆ ಕಂಪನಿ ಸೂಚಿಸಿತ್ತು. ಈ ವೇಳೆ, ಆರೋಪಿಗೆ ಮಹಿಳೆಯು ಕಂಪನಿಯಲ್ಲಿ 3 ಕೋಟಿ ಹಣ ಹೂಡುವಂತೆ ಕೇಳಿಕೊಂಡಿದ್ದರು.
ಇದಕ್ಕೆ ಒಪ್ಪಿಕೊಂಡ ರಮೇಶ್ ವ್ಯವಹಾರ ಬಗ್ಗೆ ಮಾತನಾಡಲು ಇದೇ ತಿಂಗಳು 6 ರಂದು ಬೆಂಗಳೂರಿಗೆ ಬಂದಿದ್ದ. ಖಾಸಗಿ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿ ಮಹಿಳೆಯನ್ನ ಬಿಸಿನೆಸ್ ಮಾತುಕತೆಗೆ ಆಹ್ವಾನಿಸಿದ್ದ. ಈ ವೇಳೆ, ಆರೋಪಿ ತಮ್ಮ ಮೇಲೆ ಆತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.










