ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಮತ್ತೆ ದೂರು…

84
firstsuddi

ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ತಾಲೂಕಿನ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಮತ್ತೆ ದೂರು ದಾಖಲಾಗಿದೆ. ಕಳೆದ ಎಂಟು ದಿನಗಳ ಹಿಂದೆ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಕೊಪ್ಪ ತಾಲೂಕಿನ ವಿಜಯಾನಂದ್ ಎಂಬವರು ರಾಜೇಗೌಡ ಅವರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ದೂರು ನೀಡಿದ್ದರು. ಆದರೆ ದೂರು ನೀಡಿದ ಒಂದೇ ವಾರದಲ್ಲಿ ದೂರನ್ನು ಹಿಂಪಡೆದಿದ್ದರು. ಆದರೆ ಇದೀಗ ಮತ್ತೆ ನಗರದ ಲೋಕಾಯುಕ್ತ ಕಚೇರಿಯಲ್ಲಿ ಕೊಪ್ಪ ತಾಲೂಕಿನ ದಿನೇಶ್ ಹೊಸೂರು ಎಂಬವರು ಶಾಸಕ ರಾಜೇಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.

ನಗರದ ಲೋಕಾಯುಕ್ತ ಕಚೇರಿಗೆ ನಿನ್ನೆ ವಿವಿಧ ದಾಖಲೆ ಪತ್ರಗಳೊಂದಿಗೆ ಆಗಮಿಸಿದ ಅವರು, ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಅಕ್ರಮ ಆಸ್ತಿ ಖರೀದಿ ಮತ್ತು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದರು.

ಟಿ.ಡಿ.ರಾಜೇಗೌಡ ಅವರು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಅಂದು ಅವರ ವರ್ಷದ ಆದಾಯ ಆದಾಯ 34 ಲಕ್ಷ ರೂ. ಆಗಿತ್ತು. 2021-22ರ ವರ್ಷದ ಆದಾಯ 40 ಲಕ್ಷ ರೂ. ಆಗಿದ್ದು, ಇದನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ದಾಖಲಿಸಿದ್ದಾರೆ.

ಕೃಷಿ ಮತ್ತು ವೈಯಕ್ತಿಕ ಆದಾಯ ಅಲ್ಲದೇ ಶಾಸಕ ರಾಜೇಗೌಡ ಅವರು 123 ಕೋಟಿ ರೂ. ಬ್ಯಾಂಕ್ ಸಾಲ ಮಾಡಿದ್ದು, ಶಬಾನ್ ರಂಜಾನ್ ಟ್ರಸ್ಟ್ ಗೆ ಸೇರಿದ್ದ 266 ಎಕರೆ 38 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. ಜಮೀನು ಖರೀದಿ ಸಂಬಂಧ ಲೋಕಾಯುಕ್ತ ಅಥವಾ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

123 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ಅವರು ಅನೇಕ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದು, ಅವರ ಪತ್ನಿ ಡಿ.ಕೆ.ಪುಷ್ಪಾ, ಮಗ ಟಿ.ಆರ್.ರಾಜದೇವ್, ಮಗಳು ಅರ್ಪಿತಾ ಯುವರಾಜ್ ಶೇ.33ರಂತೆ ಷೇರು ತಗೆದುಕೊಂಡು 123 ಕೋಟಿ ಆಸ್ತಿಯ ಸಾಲಕ್ಕೆ ಸಂಬಂಧಿಸಿದಂತೆ ನರಸಿಂಹರಾಜಪುರ ತಾಲೂಕು ನೋಂದಣಾಧಿಕಾರಿ ಕಚೇರಿಯಲ್ಲಿ ಆಧಾರ ಖುಲಾಸೆ ಮಾಡಿಸಿದ್ದಾರೆ. 123 ಕೋಟಿ ರೂ. ಹಣ ಎಲ್ಲಿಂದ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ದೂರು ದಾಖಲಿಸಿದ್ದೇನೆ ಎಂದರು.