ಶ್ರೀಮಂತರು, ಭೂ ಮಾಫಿಯಾ ಪರವಾದ ಭೂ ಗುತ್ತಿಗೆ ನೀತಿ ಅವೈಜ್ಞಾನಿಕ : ರೇಣುಕಾರಾಧ್ಯ.

82
firstsuddi

ಕೊಟ್ಟಿಗೆಹಾರ : ಸರ್ಕಾರ ಜಾರಿಗೆ ತರಲು ಮುಂದಾಗಿರುವ ಶ್ರೀಮಂತರು, ಭೂ ಮಾಫಿಯಾ ಪರವಾದ ಭೂ ಗುತ್ತಿಗೆ ನೀತಿ ಅವೈಜ್ಞಾನಿಕವಾದದ್ದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರೇಣುಕಾರಾಧ್ಯ ಹೇಳಿದರು.

ಸಿಪಿಐ ಪಕ್ಷ ಹಾಗೂ ಎಐವೈಎಪ್ ವತಿಯಿಂದ ಜಾವಳಿಯಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಹಲವಾರು ವರ್ಷಗಳಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳನ್ನು ಪಡೆದು ದಿನಗೂಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರು, ಹೋಟೆಲ್ ಕಾರ್ಮಿಕರು, ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರು ಮತ್ತು ಕೃಷಿ ಕೆಲಸ ಮಾಡುವ ಮೂಲ ನಿವಾಸಿಗಳು ಸ್ವಂತ ವಾಸದ ಮನೆ ಇಲ್ಲದೇ ಬದುಕುತ್ತಿದ್ದಾರೆ ಎಂದರು.

ಭೂ ಗುತ್ತಿಗೆ ನೀತಿಯನ್ನು ಸರ್ಕಾರ ಜಾರಿಗೆ ತರುವ ಮುನ್ನ ಪ್ರತಿ ಗ್ರಾಮದ ನಿವೇಶನ ರಹಿತರ ಪಟ್ಟಿ ಮಾಡಿ ನಿವೇಶನವನ್ನು ನೀಡಬೇಕು. ಶಾಲೆ, ಆಟದ ಮೈದಾನ, ಆಸ್ಪತ್ರೆ, ಸ್ಮಶಾನ ಸೇರಿದಂತೆ ಗ್ರಾಮದ ಅಭಿವೃದ್ದಿಗೆ ಬೇಕಾಗುವ ಜಾಗವನ್ನು ಮೀಸಲಿಡಬೇಕು. ಫಾರಂ ನಂ 50. 53, 57 ಹಾಗೂ 94ಸಿ ನಲ್ಲಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಅಂತಿಮಗೊಳಿಸಿ ಹಕ್ಕುಪತ್ರವನ್ನು ನೀಡಬೇಕು. ಆ ನಂತರವೇ ಸರ್ಕಾರ ಗುತ್ತಿಗೆ ನೀಡುವ ಕ್ರಮಕ್ಕೆ ಮುಂದಾಗಬೇಕು ಎಂದರು.

ಜಾವಳಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಾವಳಿ ನಾಡಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿ ಉಪ ತಹಶೀಲ್ದಾರ್ ಓಂಕಾರ್ ಅವರ ಮೂಲಕ ಕಂದಾಯ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ಪಕ್ಷ ಹಾಗೂ ಎಐವೈಎಪ್ ನ ಪದಾಧಿಕಾರಿಗಳಾದ ಗೋಪಾಲಶೆಟ್ಟಿ, ಸುಂದರ್ ಬಿ.ಎಸ್, ರಮೇಶ್, ರಘು, ಜಗದೀಶ್ ಚಕ್ರವರ್ತಿ, ಪ್ರಜ್ವಲ್ ಮುಂತಾದವರು ಇದ್ದರು.