ಕೊಲಂಬೊ : ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹಿರಿಯ ರಾಜಕಾರಣಿ ಮತ್ತು ಮಾಜಿ ಗೃಹ ಸಚಿವ ದಿನೇಶ್ ಗುಣವರ್ಧನಾ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
73 ವರ್ಷದ ದಿನೇಶ್ ಗುಣವರ್ಧನಾ ಈ ಹಿಂದೆ ವಿದೇಶಾಂಗ ಸಚಿವ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಏಪ್ರಿಲ್ ನಲ್ಲಿ ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಗೃಹ ಸಚಿವರಾಗಿ ನೇಮಿಸಿದ್ದರು.
ಗೊಟಬಯ ರಾಜಪಕ್ಸ ಅವರು ದೇಶದಿಂದ ಪಲಾಯನಗೈದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರನಿಲ್ ವಿಕ್ರಮಸಿಂಘೆ ಅವರು ಗುರುವಾರ ದೇಶದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದಾಗಿ ಪ್ರಧಾನಿ ಹುದ್ದೆ ಖಾಲಿಯಾಗಿತ್ತು.










