ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆಗಳು ಜೋರಾಗಿವೆ. ಈ ಮಧ್ಯೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ದೇಶಬಿಟ್ಟು ಪರಾರಿಯಾಗಿದ್ದಾರೆ.
ರಾಜೀನಾಮೆ ನೀಡುವುದಕ್ಕೂ ಮುನ್ನವೇ ಗೊಟಬಯ ರಾಜಪಕ್ಸ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್ ನ ರಾಜಧಾನಿ ಮಾಲೆಗೆ ಬಂದಿಳಿದಿದ್ದಾರೆ.
ಗೊಟಬಯ ರಾಜಪಕ್ಸ ಅವರು ತಮ್ಮ ಕುಟುಂಬ ದೇಶದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಈ ಹಿಂದೆ ಸುಳಿವು ನೀಡಿದ್ದರು. ಅವರ ಸಹೋದರ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಕೂಡ ಸೋಮವಾರ ದೇಶದಿಂದ ದುಬೈಗೆ ಪಲಾಯನ ಮಾಡಲು ಪ್ರಯತ್ನಿಸಿದರು. ಆದರೆ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಯಲಾಗಿತ್ತು. 71 ವರ್ಷದ ಬಾಸಿಲ್ ಅವರು ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿಗೆ ವ್ಯಾಪಕವಾಗಿ ಹೊಣೆಗಾರರಾಗಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಪತ್ರಕ್ಕೆ ರಾಜಪಕ್ಸ ಸಹಿ ಹಾಕಿದ್ದು, ಇಂದು ಸ್ಪೀಕರ್ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಅಧ್ಯಕ್ಷ ಮತ್ತು ಪ್ರಧಾನಿ ಅನುಪಸ್ಥಿತಿಯಲ್ಲಿ, ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರು ದೇಶದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.










