ಶಿರಸಿ : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಒಂದು ವೀಡಿಯೋ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಈ ಕುರಿತು ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಅವರು ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿ ಹಾಗೂ ಮಿನಿಸ್ಟರ್ ಕೈಗೆ ನೀಡಿದ್ದು, ಅದನ್ನು ಅವರು ದೆಹಲಿಯ ನಾಯಕರಿಗೆ ತಲುಪಿಸಿದ್ದಾರೆ ಎಂಬ ಮಾಹಿತಿ ಇದೆ. ಯಾವ ವೀಡಿಯೋ ಎಂದು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಕಳೆದ 2 ದಿನಗಳ ಹಿಂದೆ ಸಂತೋಷ್ ಅವರ ವೈಯಕ್ತಿಕ ವೀಡಿಯೋವನ್ನು ದೆಹಲಿಯ ನಾಯಕರಿಗೆ ತೋರಿಸಿದ್ದಾರೆ. ಇದರಿಂದ ಬೇಸರಗೊಂಡು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರಬಹುದು. ಈ ಕುರಿತು ಸರ್ಕಾರ ತನಿಖೆ ನಡೆಸುವುದರಲ್ಲಿ ಅರ್ಥವಿಲ್ಲ. ಸಿಎಂ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸುವುದೆಂದರೆ ಸಾಮಾನ್ಯ ವಿಚಾರವಲ್ಲ. ಇದರಲ್ಲಿ ಗೌಪ್ಯ ವಿಚಾರಗಳು ಅಡಗಿದೆ. ಇದರಿಂದಾಗಿ ಈ ತನಿಖೆ ಬೇರೆ ರೀತಿಯಲ್ಲೇ ಆಗಬೇಕು ಎಂದರು.










