ಸಚಿವ ಜಮೀರ್ ‘ಕರಿಯ’ ಹೇಳಿಕೆ ಸರಿಯಲ್ಲ, ಅದನ್ನು ನಾನು ಖಂಡಿಸುತ್ತೇನೆ: ಡಿ.ಕೆ.ಶಿವಕುಮಾರ್.

25

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹ್ಮದ್ ಅವರ ಕರಿಯಾ ಹೇಳಿಕೆ ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಡಿಸಿಎಂ, ನಾನು ಆ ಹೇಳಿಕೆಯನ್ನು ಒಪ್ಪುವುದಿಲ್ಲ. ಅದನ್ನು ನಾನು ಖಂಡಿಸ್ತೇನೆ. ಜಮೀರ್ ಅವರು ಏನು ಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ. ನಾನು ಆನ್ ರೆಕಾರ್ಡ್ ಹೇಳ್ತೇನೆ ಆ ಹೇಳಿಕೆ ಸರಿಯಲ್ಲ. ಜಮೀರ್ ವಿರುದ್ಧ ಕ್ರಮದ ಬಗ್ಗೆ ಆಮೇಲೆ ನೋಡೋಣ ಎಂದರು.
ಇತ್ತೀಚಿಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರನ್ನು ಕುರಿತಂತೆ ವಕ್ಫ್ ಸಚಿವ ಜಮೀರ್ ಅಹ್ಮದ್ ಅವರು ಕರಿಯ ಅಂತಾ ಸಂಬೋಧಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಮತ್ತು ಸಂಘರ್ಷಕ್ಕೆ ಕಾರಣವಾಗಿತ್ತು. ತಮ್ಮ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಸಚಿವರು ಕ್ಷಮೆಯಾಚಿಸಿದ್ದರು. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ”ಕುಮಾರಸ್ವಾಮಿ ನನ್ನನ್ನು ಕುಳ್ಳ ಅಂತಾ ಕರೀತಾರೆ, ನಾನು ಅವರನ್ನು ಕರಿಯ ಅಂತಾ ಕರೆಯುತ್ತೇನೆ” ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ಸಹ ನೀಡಿದ್ದರು.