ಚಾಮರಾಜನಗರ : ಎರಡು ದಿನಗಳ ಹಿಂದೆ ಸಚಿವ ವಿ.ಸೋಮಣ್ಣ ಕಾರ್ಯಕ್ರಮವೊಂದರಲ್ಲಿ ಕೆಂಪಮ್ಮ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದರು. ಆದರೆ ಇದೀಗ ವಿವಿಧ ಸಂಘಟನೆಗಳು ಸೋಮಣ್ಣ ವಿರುದ್ಧ ದೂರು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಚಿವ ಸೋಮಣ್ಣ ಅವರು ನನಗೆ ಥಳಿಸಿದ್ದಾರೆ ಎಂಬ ವಿಚಾರವನ್ನಿರಿಸಿಕೊಂಡು ಕೆಲ ಸಂಘ ಸಂಸ್ಥೆಯವರು, ರಾಜಕೀಯ ನಾಯಕರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ನಾನು ಬಡ ಮಹಿಳೆಯಾಗಿದ್ದು ಕೂಲಿ,ನಾಲಿ ಮಾಡಿ ಬದುಕು ನಡೆಸುತ್ತಿದ್ದೇನೆ ನನ್ನನ್ನ ನನ್ನ ಮಕ್ಕಳೊಡನೆ ಬದುಕಲು ಬಿಡಿ ಎಂದು ಮನವಿ ಮಾಡುವ ಜೊತೆಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲೂಕು ಹಂಗಳ ಗ್ರಾಮದಲ್ಲಿನ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ನನಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಸಚಿವರು ನನ್ನ ಸಮಸ್ಯೆಯನ್ನು ಆಲಿಸಿ ನಿವೇಶನ ನೀಡುತ್ತೇನೆ ನೀನು ನನ್ನ ಕಾಲಿಗೆ ನಮಸ್ಕರಿಸಬೇಡ ಸುಮ್ಮನಿರು ಎಂದು ನನ್ನ ಕೈಹಿಡಿದು ಮೇಲೆತ್ತಿದರಷ್ಟೇ. ಇದನ್ನೇ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ನನಗೆ ಹಿಂಸೆ ನೀಡುತ್ತಿದ್ದಾರೆ. ಸೋಮಣ್ಣ ಅವರು ಕಪಾಳಕ್ಕೆ ಹೊಡೆದರು ಎಂದು ಪೊಲೀಸ್ ಠಾಣೆಗೆ ದೂರು ನೀಡು ಎಂದು ಒತ್ತಾಯಿಸುತ್ತಿದ್ದಾರೆ, ಇವರಿಂದ ನನಗೆ ಮಾನಸಿಕವಾಗಿ ಹಿಂಸೆಯಾಗಿದೆ ಹೇಳಿದ್ದಾರೆ.
ಮಹಿಳೆ ಕೊಟ್ಟ ದೂರು ಆಧರಿಸಿ ಗುಂಡ್ಲುಪೇಟೆ ತಾಲೂಕಿನ ರೈತ ಸಂಘ, ತಾಲೂಕು ನಾಯಕ ಹಿತರಕ್ಷಣಾ ಸಮಿತಿ, ತಾಲೂಕು ದಸಂಸ, ತಾಲೂಕು ಕೆಆರ್ಎಸ್ ಪಾರ್ಟಿ ವಿರುದ್ಧ ದೂರು ದಾಖಲಾಗಿದೆ.










