ಸತೀಶ್ ಜಾರಕಿಹೊಳಿಗೆ ನೋಟಿಸ್, ಈ ಬಗ್ಗೆ ಸುರ್ಜೇವಾಲ ಸ್ಪಷ್ಟನೆ.

36

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದೆ ಎಂಬ ಗಾಳಿಮಾತುಗಳನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಲ್ಲಗಳೆದಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಮಾತನಾಡಿದ ಅವರು, ನೋಟಿಸ್ ನೀಡಿರುವ ಕುರಿತು ನನಗೆ ವರದಿ ತಿಳಿದಿಲ್ಲ. ಯಾರು ಈ ರೀತಿ ಗಾಳಿಮಾತುಗಳನ್ನೆಲ್ಲಾ ಹಬ್ಬಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾವ ಸಚಿವರಿಗೂ ಯಾವ ನಾಯಕರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಆಂತರಿಕ ಸಂಘರ್ಷ ಸಂಬಂಧಿತ ಗಾಳಿಮಾತುಗಳನ್ನು ಬಿಜೆಪಿ ನಾಯಕರು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿ ಪ್ರಾಯೋಜಿತ ಆಧಾರರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದೂ ಮನವಿ ಮಾಡಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಬದಲಾವಣೆ ಮಾಡುತ್ತಿದ್ದರೆ ಇಲ್ಲೇಕೆ ಬರುತ್ತಿದ್ದರು ಎಂದು ಮರು ಪ್ರಶ್ನೆಯನ್ನು ಮಾಡಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದೆ ಎಂಬ ಗಾಳಿಮಾತು ನಿನ್ನೆ ಹರಡಿತ್ತು. ಇದೀಗ ಈ ವಿಚಾರವಾಗಿ ಖುದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ.