ಸಮ ಸಮಾಜ ನಿರ್ಮಾಣವಾಗಬೇಕಾದರೆ ಕೆಳ ವರ್ಗದ ಜನ ವಿವೇಚನೆಯಿಂದ ಮತ ಚಲಾಯಿಸಬೇಕು : ಕೆ.ಟಿ.ರಾಧಾಕೃಷ್ಣ.

110
firstsuddi

ಚಿಕ್ಕಮಗಳೂರು : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯದಂತೆ ಸಮ ಸಮಾಜ ನಿರ್ಮಾಣವಾಗಬೇಕಾದರೆ ಕೆಳ ವರ್ಗದ ಜನ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿ ನಗರದ ಬಿಎಸ್‍ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಳ ವರ್ಗದ ಜನ ದೌರ್ಜನ್ಯ ಮತ್ತು ಶೋಷಣೆಯಿಂದ ಮುಕ್ತರಾಗಬೇಕು. ಸಮಾಜದಲ್ಲಿನ ಅಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಯಾಗಿ ಸಮತಾ ಸಮಾಜದ ನಿರ್ಮಾಣವಾಗಬೇಕು ಎಂಬುದು ಸಂವಿಧಾನ ಶಿಲ್ಪಿಯ ಆಶಯವಾಗಿತ್ತು ಭಕ್ತಶ್ರೇಷ್ಠ ಕನಕದಾಸರೂ ಸಹ ಅದನ್ನೇ ಪ್ರತಿಪಾದಿಸಿದ್ದರು ಎಂದರು.

ಆದರೆ ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಇನ್ನೂ ದೇಶದಲ್ಲಿ ಅಸಮಾನತೆ, ಅಸ್ಪೃಶ್ಯತೆ, ದೌರ್ಜನ್ಯ ಮತ್ತು ಶೋಷಣೆಗಳು ಮುಂದುವರೆಯುತ್ತಲೆ ಇವೆ. ಇದಕ್ಕೆ ಮೂಲ ಕಾರಣ ಕೆಳ ವರ್ಗದ ಜನ ಮೌಢ್ಯ ಮತ್ತು ಮೂಢನಂಬಿಕೆಗಳಿಂದ ಹೊರಬರದಿರುವುದು ಹಾಗೂ ವಿವೇಕ ಮತ್ತು ವಿವೇಚನೆಯಿಂದ ಮತದಾನ ಮಾಡದಿರುವುದು ಎಂದು ವಿಷಾಧಿಸಿದರು.

ಕೆಳ ವರ್ಗದ ಜನ ಈಗಲಾದರೂ ಎಚ್ಚೆತ್ತು ಮೌಢ್ಯ ಮತ್ತು ಮೂಢನಂಬಿಕೆಯಿಂದ ಹೊರಬರಬೇಕು. ವಿವೇಕ ಮತ್ತು ವಿವೇಚನೆಯಿಂದ ಮತ ಚಲಾಯಿಸಬೇಕು. ಮೇಲ್ವರ್ಗದ ಜಾತಿಗಳಂತೆ ಉಪ ಪಂಗಡಗಳ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಒಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಎಸ್‍ಪಿ ತಾಲ್ಲೂಕು ಸಂಯೋಜಕಿ ಕೆ.ಎಸ್.ಮಂಜುಳಾ ಕನಕದಾಸರು ತಮ್ಮ ಕೃತಿಗಳಿಂದ ಸಮಾಜವನ್ನು ಪರಿವರ್ತನೆ ಮಾಡಿದ ಮಹಾತ್ಮರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹೋದರತ್ವ ಸಮಿತಿಯ ಜಿಲ್ಲಾಧ್ಯಕ್ಷೆ ಕೆ.ಬಿ.ಸುಧಾ ಕನಕದಾಸರಂತಹ ಮಹಾತ್ಮರ ಚಿಂತನೆ ಮತ್ತು ಸಂದೇಶಗಳನ್ನು ನಾವು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಹೋದರತ್ವ ಸಮಿತಿ ಸ್ಥಾಪನೆಗೊಂಡು ಆರು ವರ್ಷಗಳಾಗಿದ್ದು, ಅಂದಿನಿಂದ ಇಂದಿನವರೆಗೂ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ನವೀನ್, ವಸಂತ, ಸಮಿತಿಯ ಮುಖಂಡರಾದ ಸಾಕಮ್ಮ, ಸಿದ್ಧಯ್ಯ, ಎಚ್.ಕುಮಾರ್, ರತ್ನಮ್ಮ, ಸುಮಾ, ಯಶೋಧಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು.