ರಾಮನಗರ : ನನಗೆ ಗೆಲ್ಲುವ ವಿಶ್ವಾಸ ಸರ್ಕಾರವೇ ಬಂದು ನನ್ನ ಪರವಾಗಿ ಪ್ರಚಾರ ನಡೆಸಿದೆ. ನನ್ನ ವಿರುದ್ದ ದೈತ್ಯ ಶಕ್ತಿ, ಒಕ್ಕಲಿಗರ ಬೆಂಬಲ ಇರೋ ವಂಶದ ಕುಡಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು. ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರಿ ಜಿದ್ಧಾಜಿದ್ದಿಯ ಕಣವಾಗಿ ಚನ್ನಪಟ್ಟಣ ಉಪಚುನಾವಣೆ ನಡೆಯಿತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸಾವಿರ ಮತ ಪಡೆದಿತ್ತು. ಈಗ ನಾವು ಒಂದು ಲಕ್ಷಕ್ಕಿಂತ ಅಧಿಕ ಮತ ಪಡೆದರೆ ಗೆಲುವು ಸಿಗುತ್ತದೆ. ಈವರೆಗೂ ನನ್ನ ಎಲ್ಲಾ ಚುನಾವಣೆಯಲ್ಲೂ 80 ರಿಂದ 90 ಸಾವಿರ ಮತಗಳನ್ನು ಪಡೆಯುತ್ತಿದ್ದೆ. ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದೇನೆ, ಗೆಲ್ಲುವ ವಿಶ್ವಾಸವಿದೆ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಎರಡೂ ಇಲ್ಲಿ ವರ್ಕ್ ಆಗಬಹುದು. ಹಾಗಂತ ಹತಾಶೆ ಇಲ್ಲ, ಸಮಬಲದ ಹೋರಾಟ ಅಷ್ಟೇ. ನಾನು ಕಾಂಗ್ರೆಸ್ ಸೇರುವ ಅನಿವಾರ್ಯ ಸ್ಥಿತಿಯನ್ನ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದರು. ನಾನು ಕಟ್ಟಿದ ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಸೇರುವ ಪರಿಸ್ಥಿತಿ ಬಂತು ಎಂದು ಹೇಳಿದರು. ನಾನು ಹಿಂದೆ ಗೆದ್ದಿದ್ದು ಬಿಟ್ರೆ ಇಲ್ಲಿ ಕಾಂಗ್ರೆಸ್‍ಗೆ ಅಸ್ತಿತ್ವ ಇರಲಿಲ್ಲ. ಈಗ ಕಡಿಮೆ ಸಮಯದಲ್ಲಿ ನಾನು ಸಂಘಟನೆ ಮಾಡಿದ್ದೇನೆ. ದೇವೇಗೌಡರು ಒಂದು ದೈತ್ಯ ಶಕ್ತಿ. ದೇವೇಗೌಡರಿಗೆ, ಕುಮಾರಸ್ವಾಮಿಗೆ ಬೈದರೆ ಸಹಿಸದ ಸಮುದಾಯ ಇದೆ. ಜನ ದೇವೇಗೌಡರು, ಕುಮಾರಸ್ವಾಮಿ ಅವರನ್ನ ಮಾತ್ರ ಸಮುದಾಯದ ನಾಯಕ ಅಂತ ಗುರುತಿಸುತ್ತಾರೆ. ನಮ್ಮನ್ನ ಸಮುದಾಯದ ಲೀಡರ್ ಅಂತ ಯಾವಾಗ ಸ್ವೀಕಾರ ಮಾಡುತ್ತಾರೋ ಗೊತ್ತಿಲ್ಲ ಎಂದರು.









