ಸರ್ಕಾರಿ ಉದ್ಯೋಗ ಪಡೆಯಬೇಕಾದ್ರೆ ಯುವತಿಯರು ಮಂಚ ಹತ್ತಬೇಕು : ವಿವಾದಾತ್ಮಕ ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆ.

68
firstsuddi

ಕಲಬುರಗಿ : ಯುವಕರು ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೆ ಲಂಚ ಕೊಡಬೇಕು. ಯುವತಿಯರು ನೌಕರಿ ಪಡೆಯಬೇಕು ಅಂದ್ರೆ ಮಂಚ ಹತ್ತಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಇರುವ ಉದ್ಯೋಗಗಳನ್ನು ಸರ್ಕಾರ ಯಾಕೆ ಭರ್ತಿ ಮಾಡ್ತಿಲ್ಲ. ಭರ್ತಿ ಮಾಡಲು ಮುಂದಾದ್ರೆ ಅಕ್ರಮಗಳು ಹೊರಗೆ ಬರುತ್ತಿವೆ. ಈ ಸರ್ಕಾರದಲ್ಲಿ ಪ್ರತಿ ಹುದ್ದೆ ಸಹ ಮಾರಾಟಕ್ಕಿವೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು, ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದೆ. ಈ ಮೂಲಕ ಇದೊಂದು ಲಂಚದ ಮತ್ತು ಮಂಚದ ಸರ್ಕಾರವಾಗಿದೆ ಎಂದು ಟೀಕಿಸಿದರು.

ಕೆಪಿಟಿಸಿಎಲ್ ನ 1,492 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅರ್ಜಿ ಹಾಕಿದವರು ಮೂರು ಲಕ್ಷಕ್ಕೂ ಹೆಚ್ಚು ಜನ. ಈ ಪರೀಕ್ಷೆಯನ್ನು ಕೂಡ ಸರ್ಕಾರ ಪಿಎಸ್ ಐ ಪರೀಕ್ಷೆ ನಡೆಸಿದಂತೆ ನಡೆಸಿದೆ. ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಇದೊಂದು ಅಸಮರ್ಥ ಸರ್ಕಾರ. ಏನೇ ಅಕ್ರಮ ಮಾಡಿದರೂ ನಡೆಯುತ್ತದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ. ಆದರೆ, ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎನ್ನುವುದು ಗಮನಾರ್ಹ ಸಂಗತಿ. ಶೇ 40 ವ್ಯವಹಾರದಲ್ಲಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡವರ ಬಗ್ಗೆ ಅಭ್ಯರ್ಥಿಗಳಿಗೆ ತೀವ್ರ ಅಸಮಾಧಾನವಿದೆ ಎಂದರು.