ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಇಲಾಖೆ ಹೆಚ್ಚಿನ ಭದ್ರತೆ ನೀಡಿದೆ.
ನಟ ಸಲ್ಮಾನ್ ಖಾನ್ ಅವರ ತಂದೆ ನಿನ್ನೆ ಬೆಳಗ್ಗೆ ಜಾಗಿಂಗ್ ಮುಗಿಸಿ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಬೆಂಚ್ ಮೇಲೆ ಕುಳಿತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡುವ ಬೆದರಿಕೆ ಪತ್ರವನ್ನು ನೀಡಿದ್ದರು. ಬಳಿಕ ಸಲೀಂಖಾನ್ ತಮ್ಮ ಭದ್ರತಾ ಸಿಬ್ಬಂದಿಯ ಜೊತೆಗೆ ಪೊಲೀಸರನ್ನು ಸಂಪರ್ಕಿಸಿ, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 506-II (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಖಾಕಿ ಪಡೆ ಕಾರ್ಯೋನ್ಮುಖವಾಗಿದೆ. ಜೊತೆಗೆ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು ಮಾಡಿಕೊಂಡು, ತನಿಖೆ ಆರಂಭಿಸಲಾಗಿದೆ.
2018ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲಿಗೆ ಹೋಗಿದ್ದರು. ಈ ಸಮಯದಲ್ಲಿ ಕೋರ್ಟ್ ಹೊರಗೆ ಮಾತನಾಡಿದ್ದ ಬಿಷ್ಣೋಯ್, ಸಲ್ಮಾನ್ ಖಾನ್ ಅವರನ್ನ ಕೊಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದರು.










