ನವದೆಹಲಿ : ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆ ಕೇಳಿದ್ದಾರೆ ಎಂಬುದನ್ನು ಸಾಬೀತುಪಡಿಸಿ ಎಂದು ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಸವಾಲು ಹಾಕಿದ್ದಾರೆ.
ಲೋಕಸಭೆಯಿಂದ ಅನರ್ಹಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನನ್ನ ಹೆಸರು ಸಾವರ್ಕರ್ ಅಲ್ಲ, ನನ್ನ ಹೆಸರು ಗಾಂಧಿ. ಗಾಂಧಿ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಂಜಿತ್ ಸಾವರ್ಕರ್, ರಾಹುಲ್ ಗಾಂಧಿ ಅವರು ಸಾವರ್ಕರ್ ಅಲ್ಲದ ಕಾರಣ ಕ್ಷಮೆ ಕೇಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೇ ಬ್ರಿಟಿಷರಲ್ಲಿ ಸಾವರ್ಕರ್ ಕ್ಷಮೆಯಾಚಿಸಿದ್ದಾರೆ ಎನ್ನುವುದರ ಕುರಿತು ದಾಖಲೆಗಳನ್ನು ತೋರಿಸಲು ರಾಹುಲ್ ಗಾಂಧಿಗೆ ಸವಾಲು ಹಾಕಿದರು.
ರಾಜಕೀಯ ಪ್ರಚಾರಕ್ಕಾಗಿ ದೇಶಭಕ್ತರ ಹೆಸರನ್ನು ಬಳಸುವುದು ತಪ್ಪು ಹಾಗೂ ಶೋಚನೀಯವಾಗಿದೆ. ಈ ರೀತಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.










