ಕಲಬುರಗಿ : ರಾಜ್ಯದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಹಾಗೂ ಕೋವಿಡ್ -19 ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ಬಗ್ಗೆ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಲಾಕ್ ಡೌನ್ ಕುರಿತಾಗಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಸಂಜೆ ಕೋವಿಡ್-19 ಬಗ್ಗೆ ಸಭೆ ನಡೆಸಲಿದ್ದೇವೆ. ಅದರಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯರು, ತಾಂತ್ರಿಕ ಸಲಹಾ ಸಮಿತಿ ತಜ್ಞರು, ಹಿರಿಯ ಅಧಿಕಾರಿಗಳು, ನಮ್ಮ ಸಂಪುಟದ ಸಹೋದ್ಯೋಗಿಗಳು ಕೂಡ ಇರುತ್ತಾರೆ. ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೋವಿಡ್ ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ಸಹಜವಾಗಿಯೇ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ ವಹಿಸಬೇಕಿದ್ದು, ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಗಡಿಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದರು.
ಶಾಲೆಗೆ ರಜೆ ಕೊಡುವುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಕೇಳಿ ತೀರ್ಮಾನ ಮಾಡುತ್ತೇವೆ. ಲಾಕ್ ಡೌನ್, ಸೆಮಿಲಾಕ್ ಡೌನ್ ಬಗ್ಗೆ ಎಕ್ಸ್ ಪರ್ಟ್ ಮೀಟಿಂಗ್ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಜನರು ಸಹಕಾರ ನೀಡಿದ್ರೆ ಕೊವಿಡ್ ನಿಯಂತ್ರಣ ಮಾಡಬಹುದು ಎಂದರು.
ರಾಮನಗರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಜೆಪಿಯ ಸಚಿವರ ನಡುವೆ ಜಟಾಪಟಿ ನಿನ್ನೆ ನಡೆದಿತ್ತು. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ನಡೆದಿರುವ ಘಟನೆ ಇದು ನಮ್ಮ ಕರ್ನಾಟಕ ಸಂಸ್ಕೃತಿ ಅಲ್ಲ. ನಮ್ಮ ಮಧ್ಯೆ ಏನೇ ಇದ್ದರೂ ಮಾತಿನಿಂದ ವಿಚಾರಗಳನ್ನು ಹೇಳಿಕೊಳ್ಳಬಹುದೇ ಹೊರತಾಗಿ, ಇಂತಹ ವರ್ತನೆ ಯಾರಿಗೂ ಶೋಭೆ ತರುವಂತದ್ದಲ್ಲ. ನಾನು ನಿನ್ನೆ ಈ ಮಾತನ್ನು ಅಲ್ಲಿಯೇ ಹೇಳಿದ್ದೇನೆ ಎಂದರು.










