ಸಿಎಂ ಭೇಟಿ ಮಾಡಿದ ರಿಷಬ್ ಶೆಟ್ಟಿ – ಕಾಡಿನಂಚಿನ ಜನರ ಸಮಸ್ಯೆ ಪರಿಹರಿಸುವಂತೆ ಮನವಿ…

44
firstsuddi

ನಟ ರಿಷಬ್ ಶೆಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಭೇಟಿಯ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಭೇಟಿಯ ಹಿಂದಿನ ಉದ್ದೇಶವನ್ನು ತಿಳಿಸಿದ್ದಾರೆ. ತಾವು ಕೊಟ್ಟಿರುವ ಮನವಿಗೂ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದೂ ಅವರು ವಿಡಿಯೋ ಮೂಲಕ ಹೇಳಿದ್ದಾರೆ.

ವಿಡಿಯೋದಲ್ಲೇನಿದೆ?
ಕಾಂತಾರ ಸಿನಿಮಾದ ನಂತರ ಕಾಡಂಚಿನ ಜನರು ಮತ್ತು ಕಾಡಿನ ಜೊತೆ ಸಮಯ ಕಳೆಯುತ್ತಾ, ಅರಣ್ಯ ಇಲಾಖೆಯವರ ಜೊತೆ ಬೆರೆಯುತ್ತಾ, ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುತ್ತಾ ಒಂದಷ್ಟು ಜರ್ನಿ ಮಾಡಿದೆ. ಕೃಷಿಕರಿಗೆ ಕಾಡಾನೆ ಸಮಸ್ಯೆ ಇದೆ. ಕಾಡ್ಗಿಚ್ಚಿನ ಸಂದರ್ಭದಲ್ಲಿ ವಾಚರ್ ಗಳು ಸಾಕಷ್ಟು ರಿಸ್ಕ್ ತೆಗೆದುಕೊಂಡು ಕಾಡನ್ನು ಉಳಿಸುತ್ತಿದ್ದಾರೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರ ಜೊತೆಗೆ ಒಂದಷ್ಟು ಚರ್ಚೆ ಮಾಡಿದ್ದೆ ಎಂದಿದ್ದಾರೆ ರಿಷಬ್ ಶೆಟ್ಟಿ.

ಆಗಬೇಕಾದ ಕೆಲಸ ಸಾಕಷ್ಟು ಇವೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಭರ್ತಿ ಆಗಬೇಕು. ವಾಚರ್ಗಳ ನೇಮಕಾತಿ ಆಗಬೇಕು. ಆ ರೀತಿ 20 ಅಂಶಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಕೂಡ ಇತ್ತೀಚಿನ ದಿನಗಳಲ್ಲಿ ಕಾಡಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವಂತೆ ಆದೇಶ ನೀಡುವುದಾಗಿ ಅವರು ತಿಳಿಸಿದ್ದಾರೆ. ಇಂಥ ಮುಖ್ಯಮಂತ್ರಿಗಳನ್ನು ಪಡೆದಿದ್ದಕ್ಕೆ ನಾವೆಲ್ಲ ಧನ್ಯ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.